ಬೆಂಗಳೂರು,ಸೆ.19-ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಶಮನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ದೆಹಲಿಯಲ್ಲಿ ಇಂದು ಕರೆದ ರಾಜ್ಯ ನಾಯಕರ ಸಭೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಆಮಂತ್ರಣ ನೀಡದೆ ಇರುವುದಕ್ಕೆ ಪಕ್ಷದ ಲಿಂಗಾಯಿತ ಶಾಸಕರು, ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ಪ್ರಮುಖ ಸಮುದಾಯದ ಪ್ರತಿನಿಧಿಯಾದ ಅವರನ್ನು ಸಭೆಗೆ ಆಹ್ವಾನಿಸದೆ ಇರುವುದು ಖಂಡನೀಯ. ನೆಪಕ್ಕೆ ಮಾತ್ರ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ವರಿಷ್ಠರ ನಡೆಗೆ ಶಾಸಕರು ಗರಂ ಆಗಿದ್ದಾರೆ.
ಇದು ಸಮುದಾಯಕ್ಕೆ ಮಾಡಿದ ದೊಡ್ಡ ಅವಮಾನ. ಇದನ್ನು ಸರಿಪಡಿಸುವಂತೆ ಪಕ್ಷದ ವರಿಷ್ಠರಲ್ಲಿ ಶಾಸಕರು ಮನವಿ ಮಾಡಿದ್ದಾರೆ.