ಬೆಂಗಳೂರು,ಸೆ.19-ಸಮ್ಮಿಶ್ರ ಸರ್ಕಾರದಿಂದ ಬಂಡಾಯ ಸಾರಿದ್ದ ಬೆಳಗಾವಿ ಜಾರಕಿಹೊಳಿ ಸಹೋದರರ ಭಿನ್ನಮತ ತಾತ್ಕಾಲಿhವಾಗಿ ಶಮನಗೊಂಡಿದ್ದರೂ ಸರ್ಕಾರ ರಚಿಸುವ ಆಸೆಯನ್ನು ಬಿಜೆಪಿ ಕೈಬಿಟ್ಟಿಲ್ಲ.
ಶಾಸಕ ಸತೀಶ್ ಜಾರಕಿಹೊಳಿ ಭಿನ್ನಮತೀಯ ಚಟುವಟಿಕೆಗಳಿಂದ ದೂರವಾಗಿದ್ದರೂ ಅವರ ಸಹೋದರ ರಮೇಶ್ ಜಾರಕಿಹೊಳಿ ನಡೆ ಮಾತ್ರ ಈವರೆಗೂ ನಿಗೂಢವಾಗಿಯೇ ಉಳಿದಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಾರಕಿಹೊಳಿ ಸಹೋದರರ ಜೊತೆ ನಡೆಸಿದ ಸಂಧಾನ ಯಶಸ್ವಿಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದರೂ ರಮೇಶ್ ಜಾರಕಿಹೊಳಿ ಅವರ ನಡೆ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂಬುದು ಬಿಜೆಪಿ ನಾಯಕರದು.
ಕುಮಾರಸ್ವಾಮಿ ಸಂಧಾನ ನಡೆಸಿ 24 ಗಂಟೆಯಾದರೂ ರಮೇಶ್ ಜಾರಕಿಹೊಳಿ ಏನೂ ಮಾಡುತ್ತಿದ್ದಾರೆ, ಎಲ್ಲಿದ್ದಾರೆ, ಅವರ ನಡೆಯೇನು ಎಂಬ ಗುಟ್ಟು ರಟ್ಟಾಗಿಲ್ಲ. ಕಡೇ ಪಕ್ಷ ಮಾಧ್ಯಮಗಳಿಗಾಗಲಿ ಅವರು ಅಸಮಾಧಾನ ಸರಿಹೋಗಿದೆ ಎಂದು ಒಂದೇ ಒಂದು ಹೇಳಿಕೆ ಕೊಡದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿವೆ.
ರಮೇಶ್ ಅವರ ಈ ಕುತೂಹಲವೇ ಬಿಜೆಪಿಯ ಸರ್ಕಾರ ರಚನೆಯ ಆಸೆಯನ್ನು ಜೀವಂತವಾಗಿರಿಸಿದೆ. ನೋಡುತ್ತಾ ಇರಿ ನಾವು ಯಾವುದನ್ನೂ ಬಹಿರಂಗ ಪಡೆಸುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತಕ್ಕೂ ನಮಗೂ ಸಂಬಂಧವೇ ಇಲ್ಲ. ಶುಕ್ರವಾರದವರೆಗೂ ಕಾದು ನೋಡಿ ಆಮೇಲೇಯೇ ನಿಜವಾದ ನಾಟಕ ತೆರೆ ಮೇಲೆ ಅನಾವರಣಗೊಳ್ಳುತ್ತದೆ ಎನ್ನುತ್ತಾರೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪರಮಾಪ್ತರು.
ಆಪರೇಷನ್ ಕಮಲ ನಾವು ನಡೆಸುತ್ತಿಲ್ಲ. ಇದು ವಿಫಲವೂ ಆಗಿಲ್ಲ. ಕಾಂಗ್ರೆಸ್ನಲ್ಲಿ ಉಂಟಾಗಿರುವ ಅಸಮಾಧಾನದಿಂದ ಬೇಸತ್ತು ಕೆಲ ಶಾಸಕರು ಬಿಜೆಪಿಗೆ ಬರಲು ಸಿದ್ದರಾಗಿದ್ದಾರೆ. ಅದು ಹೇಗೆ, ಯಾವಾಗ ಎಂಬುದನ್ನು ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಸಿದ್ದು ಮಾತಿಗೆ ಬಗ್ಗದವರು ಎಚ್ಡಿಕೆಗೆ ಬಗುತ್ತಾರ?:
ಇನ್ನು ಸಿದ್ದರಾಮಯ್ಯನವರನ್ನೆ ತಮ್ಮ ರಾಜಕೀಯ ಗುರುಗಳೆಂದು ನಂಬಿಕೊಂಡು ರಾಜಕಾರಣ ಮಾಡಿರುವ ಜಾರಕಿಹೊಳಿ ಸಹೋದರರು ಅವರ ಸಂಧಾನಕ್ಕೆ ಬಗ್ಗದವರು ಕುಮಾರಸ್ವಾಮಿ ಮಾತಿಗೆ ಮರಳಾಗುತ್ತಾರೆ ಎಂಬುದು ಬಿಜೆಪಿಯ ಪ್ರಶ್ನೆ.
ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಧಾನ ನಡೆಸಿರಬಹುದು. ಯಾವುದೋ ಒಂದು ಕಾರಣಕ್ಕಾಗಿ ಸತೀಶ್ ಜಾರಕಿಹೊಳಿ ಸಂಧಾನಕ್ಕೆ ಒಪ್ಪಿಕೊಂಡಿರಬಹುದು. ಆದರೆ ರಮೇಶ್ ಜಾರಕಿಹೊಳಿ ಮುನಿಸು ಇನ್ನು ಶಮನಗೊಂಡಿಲ್ಲ.ಹೀಗಾಗಿಯೇ ಅವರು ಮಾಧ್ಯಮಗಳಿಗೆ ಯಾವುದೇ ಬಹಿರಂಗ ಹೇಳಿಕೆ ನೀಡುತ್ತಿಲ್ಲ. ಒಂದೆರಡು ದಿನಗಳವರೆಗೆ ಕಾದು ನೋಡಲು ಬಿಜೆಪಿ ಮುಂದಾಗಿದೆ.
ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಯೇ ಬೇರೆ, ನಡೆಯುತ್ತಿರುವ ವಿದ್ಯಮಾನಗಳೇ ಬೇರೆ. ಆಪರೇಷನ್ ಕಮಲದಲ್ಲಿ ನೇರವಾಗಿ ನಾವು ಭಾಗಿಯಾಗಿದ್ದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಎಲ್ಲಿಯೂ ಗುರುತಿಸಿಕೊಳ್ಳದಂತೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ತೆರೆಮರೆಯಲ್ಲೇ ನಾವು ಆಟ ಆಡುತ್ತಿದ್ದೇವೇ ಎಂದು ಮತ್ತೊಬ್ಬ ಪ್ರಮುಖರು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಸಮ್ಮಿಶ ಸರ್ಕಾರ ಉಳಿಯುವುದಿಲ್ಲ. ಎಲ್ಲವನ್ನು ಲೆಕ್ಕ ಹಾಕಿಯೇ ಅಖಾಡಕ್ಕೆ ಧುಮುಕಿದ್ದೇವೆ. ಈ ಬಾರಿ ನಮ್ಮ ಕಾರ್ಯಾಚರಣೆ ವಿಫಲವಾಗುವುದಿಲ್ಲ ಎಂಬುದು ಬಿಜೆಪಿಯ ಅನೇಕ ನಾಯಕರ ವಾದ.
ಹೀಗಾಗಿಯೇ ಇನ್ನು ಸರ್ಕಾರ ರಚಿಸುವ ಆತ್ಮವಿಶ್ವಾಸವನ್ನು ಬಿಜೆಪಿಯ ಯಾವುದೇ ನಾಯಕರು ಕಳೆದುಕೊಂಡಿಲ್ಲ.