ರೈತರ ಸಂಪೂರ್ಣ ಸಾಲ ಮನ್ನಾ: ಭಾಗಶಃ ಈಡೇರಿಕೆ

ಬೆಂಗಳೂರು,ಸೆ.19- ರೈತರ ಸಂಪೂರ್ಣ ಸಾಲ ಮನ್ನಾ ಭರವಸೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆಗೂ ಭಾಗಶಃ ಭರವಸೆ ಈಡೇರಿಸಿದ್ದು, ಇದೀಗ ಇದರ ರಾಜಕೀಯ ಲಾಭ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ದಾರಂತೆ.
ರೈತರ ಸಂಪೂರ್ಣ ಸಾಲ ಮನ್ನಾ ವಿಚಾರವಾಗಿ ಹಲವು ಅಡೆತಡೆಗಳ ಮಧ್ಯೆ ಕೆಲ ಷರತ್ತುಗಳೊಂದಿಗೆ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಬ್ಯಾಂಕ್‍ಗಳ ಸಾಲ ಮನ್ನಾ ಘೋಷಣೆಯಾಗಿದ್ದರೂ ಅದರ ಜಾರಿ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಸಹಕಾರಿ ಬ್ಯಾಂಕ್‍ಗಳ ಸಾಲ ಮನ್ನಾ ವಿಚಾರವಾಗಿ ಸಿಎಂ ತಕ್ಕಮಟ್ಟಿಗೆ ಯಶಸ್ವಿ ಕಂಡಿದ್ದಾರೆ.

ಇದೀಗ ಕುಮಾರಸ್ವಾಮಿ ಈ ಸಾಧನೆಯ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ತೊಡಗಿದ್ದು, ತಾವು ಚುನಾವಣೆ ವೇಳೆ ರೈತರಿಗೆ ನೀಡಿದ ಮಾತನ್ನು ಈಡೇರಿಸಿದ್ದೇವೆಂಬ ಪತ್ರವನ್ನು ಅನ್ನದಾತನಿಗೆ ರವಾನಿಸಲು ಕುಮಾರಸ್ವಾಮಿ ಯೋಚಿಸುತ್ತಿದ್ದಾರಂತೆ.
ಆ ಮೂಲಕ ಸಾಲ ಮನ್ನಾದ ಕ್ರೆಡಿಟ್ ಪಡೆಯಲು ಜೆಡಿಎಸ್ ಪಕ್ಷ ಮುಂದಾಗಿದೆ. ಮೊದಲ ಹಂತದಲ್ಲಿ ಸಹಕಾರಿ ಬ್ಯಾಂಕಿನ 1 ಲಕ್ಷದವರೆಗಿನ ಸಾಲ ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆ ನಿಟ್ಟಿನಲ್ಲಿ ಎರಡು ಕಂತುಗಳಲ್ಲಿ ಹಣವನ್ನೂ ಬಿಡುಗಡೆ ಮಾಡಿದೆ.

ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಲ ಮನ್ನಾ ಮಾಡಿ ರೈತರಿಗೆ ಪತ್ರ ಬರೆದ ಮಾದರಿಯಲ್ಲಿ ರೈತರಿಗೆ ನೇರವಾಗಿ ಪತ್ರ ಬರೆಯುವ ಮೂಲಕ ರಾಜಕೀಯ ಲಾಭ ಪಡೆಯಲು ಕುಮಾರಸ್ವಾಮಿ ಪ್ಲಾನ್ ಹಾಕಿದ್ದಾರೆ. ಈಗಾಗಲೇ ರೈತರಿಗೆ ಕಳುಹಿಸಲು ಉದ್ದೇಶಿಸಿರುವ ಕರಡು ಪತ್ರ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಸಾಲ ಮನ್ನಾವಾದ ರೈತರಿಗೆ ಪತ್ರ ರವಾನಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪತ್ರದಲ್ಲಿ ಏನಿರಲಿದೆ?: ಪತ್ರದಲ್ಲಿ ತಾವು ನೀಡಿದ ವಾಗ್ದಾನದಂತೆ ಸಹಕಾರಿ ಬ್ಯಾಂಕುಗಳಿಂದ ಪಡೆದ 1 ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡಿ ನಿಮ್ಮನ್ನು ಋಣಮುಕ್ತರಾಗಿಸಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ. ಅವಶ್ಯವಿದ್ದಲ್ಲಿ ಗಡುವು ದಿನಾಂಕ ಮುಗಿದ ಬಳಿಕ ಮತ್ತೆ ನೀವು ಬೆಳೆ ಸಾಲ ಪಡೆಯಬಹುದಾಗಿದೆ ಎಂಬ ಟಿಪ್ಪಣಿ ಹೊಂದಿರಲಿದೆಯಂತೆ.

ಜತೆಗೆ ಪತ್ರದಲ್ಲಿನ ರೈತನ ಹೆಸರು, ಬ್ಯಾಂಕಿನ ಸದಸ್ಯತ್ವ, ಸಂಖ್ಯೆ, ಸಹಕಾರಿ ಅಥವಾ ಬ್ಯಾಂಕಿನ ಹೆಸರು, ಸಾಲದ ಮೊತ್ತ, ಸಾಲ ಕಟ್ಟುವ ಗಡುವಿನ ವಿವರ ಮತ್ತು ಪತ್ರದಲ್ಲಿ ಮುಖ್ಯಮಂತ್ರಿಗಳ ಸಹಿ ಇರಲಿದೆಯಂತೆ.
ಒಂದೇ ಕಲ್ಲಿನಿಂದ ಎರಡು ಹಕ್ಕಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರ ರೂಪಿಸಿದ್ದಾರೆ. ರೈತರಿಗೆ ಪತ್ರ ಬರೆಯುವ ಮೂಲಕ ಸಾಲ ಮನ್ನಾ ಸೌಲಭ್ಯ ಪಡೆದ ರೈತರಲ್ಲಿ ಜೆಡಿಎಸ್ ಬಗ್ಗೆ ಒಲವು ಮೂಡುವಂತೆ ಮಾಡುವುದು, ಕಾಂಗ್ರೆಸ್ ಮತ್ತು ಬಿಜೆಪಿಗೆ ರಾಜಕೀಯವಾಗಿ ಪೆಟ್ಟು ನೀಡುವ ತಂತ್ರ ಹೆಣೆದಿದ್ದಾರೆ.
ಈ ಪ್ಲಾನ್ ಹಿಂದೆ ಸಹಕಾರ ಇಲಾಖೆ ಸಚಿವ ಬಂಡೆಪ್ಪ ಕಾಶೆಂಪೂರ್ ಮತ್ತು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಇದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮವಾಗಿ 23 ಲಕ್ಷ ರೈತರಿಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ರೈತರಿಗೆ ರವಾನಿಸಲು ಉದ್ದೇಶಿಸಲಾದ ಪತ್ರವನ್ನು ದೋಸ್ತಿ ಪಕ್ಷ ಕಾಂಗ್ರೆಸ್ ಯಾವ ರೀತಿ ಸ್ವೀಕರಿಸಲಿದೆ ಎಂಬುದೇ ಕುತೂಹಲಕಾರಿ ವಿಷಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ