ಬೆಂಗಳೂರು: ಜೆಡಿಎಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಾಜಿ ಸಚಿವ ಎ.ಮಂಜು ಮಾಡಿರುವ 50 ಎಕರೆ ಸರ್ಕಾರಿ ಭೂಮಿ ಕಬಳಿಕೆ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಬಿಜೆಪಿ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದ ಬಿಎಸ್ವೈ,ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಬಿರುಕು ಕಾಣಿಸಿಕೊಂಡಿದೆ. ಸಮ್ಮಿಶ್ರ ಸರ್ಕಾರ ಇದ್ದು ಇಲ್ಲದಂತಾಗಿದೆ. ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಜನರ ಸಂಕಷ್ಟ ಆಲಿಸುವ ಬಗ್ಗೆ ಗಮನವನ್ನೂ ಹರಿಸುತ್ತಿಲ್ಲ, ಸರ್ಕಾರಕ್ಕೆ ಅಸ್ಥಿರತೆ ಭಯ ಕಾಡಲು ಆರಂಭವಾಗಿದೆ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಬಿರುಕು ಕಾಣಿಸಿಕೊಂಡಿದೆ. ಸಮ್ಮಿಶ್ರ ಸರ್ಕಾರ ಇದ್ದು ಇಲ್ಲದಂತಾಗಿದೆ. ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಜನರ ಸಂಕಷ್ಟ ಆಲಿಸುವವರು ಯಾರು ಇಲ್ಲ ಎಂದು ಆರೋಪಿಸಿದರು.ಸರ್ಕಾರದಲ್ಲಿ ಅಸ್ಥಿರತೆ ಭಯ ಕಾಡುತ್ತಿದೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 37 ಸ್ಥಾನಗಳಿಸಿದವರು ಅಧಿಕಾರದಲ್ಲಿದೆ, 104 ಸ್ಥಾನಗಳಿಸಿರುವ ನಾವು ಪ್ರತಿಪಕ್ಷದ ಸ್ಥಾನದಲ್ಲಿ ಇದ್ದೇವೆ. ಕಮಿಷನ್ ಏಜೆಂಟರಿಂದ ಈ ಸರ್ಕಾರ ನಡೆಯುತ್ತಿದೆ. 8 ರಿಂದ 10 ಪರ್ಸೆಂಟ್ ಇಲ್ಲದೆ ನೀರಾವರಿ ಇಲಾಖೆ ಬಿಲ್ ಬಿಡುಗಡೆ ಆಗುತ್ತಿಲ್ಲ. ಲೋಕೋಪಯೋಗಿ ಇಲಾಖೆ ಸಚಿವರು ಕಮಿಷನ್ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಸಿದ್ಧತೆ ನಡೆಸುತ್ತಿದ್ದು, ಹಿಂದುಳಿದ ವರ್ಗಗಳ ಜನರನ್ನು ಸೆಳೆಯಬೇಕಿದೆ. ಸಂಘಟನೆ ಬಲಪಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರದ ವೈಫಲ್ಯತೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕು. 15-20 ದಿನಗಳಲ್ಲಿ ಹೋರಾಟದ ಬಗ್ಗೆ ರೂಪುರೇಷೆ ರಚಿಸಲಾಗುವುದು ಎಂದರು.
ಸಭೆಯಲ್ಲಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಬಿಜೆಪಿಯ 104 ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.