ಬೆಂಗಳೂರು, ಸೆ.18-ರಾಜ್ಯದಲ್ಲಿ ನೆರೆ ಹಾಗೂ ಬರ ಪರಿಸ್ಥಿತಿ ಇದ್ದರೂ ಬಿಜೆಪಿಗೆ ಅಧಿಕಾರದ ದಾಹವೇ ಮುಖ್ಯವಾಗಿದೆ ಎಂದು ಜೆಡಿಎಸ್ ವಕ್ತಾರ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ಬಾಬು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆ ಚುನಾವಣೆ ನಂತರ ಬಿಜೆಪಿಗೆ ಸರ್ಕಾರ ರಚಿಸಲು ನೀಡಿದ್ದ ಅಧಿಕಾರದಲ್ಲಿ ವಿಫಲವಾದರು. ಆ ನಂತರ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಈಗ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಮತ್ತೆ ಪ್ರಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರ. ನೈತಿಕ ರಾಜಕಾರಣಕ್ಕೆ ಯತ್ನಿಸುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಬರದಿಂದ ಜನರು ಸಾಕಷ್ಟು ತೊಂದರೆಗೀಡಾಗಿದ್ದಾರೆ. ಇಂತಹ ಹಲವಾರು ಸಮಸ್ಯೆಗಳಿದ್ದರೂ ಆ ಬಗ್ಗೆ ಗಮನಹರಿಸದೆ ಅಕ್ರಮವಾಗಿ ಆಮಿಷವೊಡ್ಡಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಆದರೂ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಹೇಳಿದರು.
ಬಿಜೆಪಿಯವರು ವೃಥಾ ರಾಜಕೀಯ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿರುವ ರಚನಾತ್ಮಕ ಕಾರ್ಯಗಳಿಗೆ ಒತ್ತು ಕೊಟ್ಟು ಅಭಿವೃದ್ಧಿ ಕಾರ್ಯಗಳಲ್ಲಿ ಸಲಹೆ ನೀಡುತ್ತಾ, ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಪರಿಹಾರ ಕಾರ್ಯಕ್ಕೆ ಮುಂದಾಗಬೇಕು. ಆದರೆ ಅದೆಲ್ಲವನ್ನು ಬಿಟ್ಟು ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆಕ್ಷೇಪಿಸಿದರು.