ಬೆಂಗಳೂರು, ಸೆ.18- ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬುಡವೇ ಅಲುಗಾಡುತ್ತಿರುವ ಸಂದರ್ಭದಲ್ಲೇ ಪ್ರಭಾವಿ ನಾಯಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹವಾಲ ವಹಿವಾಟು ನಡೆಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದೂರು ದಾಖಲಿಸಿದೆ.
ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲ ಸೃಷ್ಟಿಸಿದ್ದು, ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಇಡಿ ಅಧಿಕಾರಿಗಳು ಯಾವುದೇ ಸಂದರ್ಭದಲ್ಲೂ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಇಂದು ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್, ದೆಹಲಿಯ ಕರ್ನಾಟಕ ಭವನದ ಅಧಿಕಾರಿ ಆಂಜನೇಯ ಹನುಮಂತಯ್ಯ, ಸಚಿನ್ ನಾರಾಯಣ್ ಹಾಗೂ ಎನ್.ರಾಜೇಂದ್ರ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಯಾವುದೇ ಸಂದರ್ಭದಲ್ಲಾದರೂ ಅವರಿಗೆ ಸಮನ್ಸ್ ಜಾರಿ ಮಾಡುವ ಸಂಭವವಿದೆ.
ಡಿ.ಕೆ.ಶಿವಕುಮಾರ್ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ಅಗತ್ಯ ಕಂಡು ಬಂದರೆ ವಶಕ್ಕೆ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಮೊದಲನೆ ಆರೋಪಿಯಾಗಿದ್ದು , ದೆಹಲಿ ಮೂಲಕ ಕೋಟ್ಯಂತರ ರೂ. ಹವಾಲ ದಂಧೆ ನಡೆಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಸಚಿವ ಡಿ.ಕೆ.ಶಿವಕುಮಾರ್, ಉದ್ಯಮಿ ಸಚಿನ್ ನಾರಾಯಣ್ ಹಾಗೂ ಶರ್ಮ ಸಮೂಹ ಸಾರಿಗೆಯ ಮಾಲೀಕ ಎಸ್.ಕೆ.ಶರ್ಮ ಇವರುಗಳು ಹವಾಲ ದಂಧೆ ನಡೆಸಿರುವುದಕ್ಕೆ ಪುರಾವೆಗಳಿವೆ.
ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ದೆಹಲಿಯಲ್ಲಿ ವಹಿವಾಟು ನಡೆಸಿದ್ದಾರೆ ಎನ್ನುವುದು ಇಡಿ ಅಧಿಕಾರಿಗಳ ವಾದ.
ನವದೆಹಲಿಯ ಫ್ಲಾಟ್ನಲ್ಲಿ ಸಿಕ್ಕಿದ್ದ ಎಂಟೂವರೆ ಕೋಟಿ ಹಣವನ್ನು ಕರ್ನಾಟಕ ಭವನದ ಅಧಿಕಾರಿ ಆಂಜನೇಯ ಹನುಮಂತಯ್ಯ ಮೂಲಕ ಹಣವನ್ನು ಸಾಗಿಸಲಾಗಿದೆ. ಇದಕ್ಕೆ ದಾಖಲೆಗಳನ್ನು ನೀಡುವುದಾಗಲಿ ಇಲ್ಲವೆ ತೆರಿಗೆಯನ್ನು ಸಹ ಕಟ್ಟಿಲ್ಲ ಎಂದು ಹೇಳಿದೆ.
ಕರ್ನಾಟಕ ಭವನದ ಉಸ್ತುವಾರಿ ರಾಜೇಂದ್ರ ಕೂಡ ಈ ಪ್ರಕರಣದ ಮತ್ತೋರ್ವ ಕಿಂಗ್ ಪಿನ್ ಆಗಿದ್ದು ಶರ್ಮ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಹಣದ ವಹಿವಾಟಿನಲ್ಲಿ ಪ್ರಮುಖಪಾತ್ರ ವಹಿಸಿ ಕೋಟ್ಯಂತರ ರೂ. ತೆರಿಗೆಯನ್ನು ವಂಚಿಸಿದ್ದಾರೆ.
ಬೆಂಗಳೂರು ಹೊರವಲಯದಲ್ಲಿರುವ ಈಗಲ್ಟನ್ ರೆಸಾರ್ಟ್ನಲ್ಲಿ ದಾಳಿ ಸಂದರ್ಭದಲ್ಲಿ ಕಾಗದ ಪತ್ರಗಳನ್ನು ಹರಿದು ಹಾಕಿರುವುದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ವೇಳೆ ಸಿಕ್ಕಿರುವ ಅಕ್ರಮ ಆಸ್ತಿ ಬಗ್ಗೆ ಕ್ಷಣಕ್ಷಣಕ್ಕೂ ಮಾಹಿತಿಯನ್ನು ಬದಲಾಯಿಸುತ್ತಿರುವುದು, ಹವಾಲದಂಧೆ ನಡೆಸಿರುವುದು ಹಾಗೂ ದೆಹಲಿಯ ಫ್ಲಾಟ್ ಒಂದರಲ್ಲಿ ಸಿಕ್ಕಿರುವ 8.50ಕೋಟಿಗೆ ಸೂಕ್ತ ದಾಖಲೆಗಳನ್ನು ನೀಡದಿರುವ ಬಗ್ಗೆ ದೂರು ದಾಖಲಿಸಿಕೊಂಡಿದೆ.
ಒಂದು ವೇಳೆ ಡಿ.ಕೆ.ಶಿವಕುಮಾರ್ ಮೇಲೆ ಕಂಡು ಬಂದಿರುವ ಆರೋಪಗಳು ಸಾಬೀತಾದರೆ ಮೂರರಿಂದ ಏಳು ವರ್ಷ ಜೈಲು ಶಿಕ್ಷೆಯಾಗುವ ಸಂಭವವಿದೆ.
ಏನಿದು ಪ್ರಕರಣ:
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಬೆಂಗಳೂರು, ಕನಕಪುರ, ರಾಮನಗರ, ಮೈಸೂರು ಹಾಗೂ ನವದೆಹಲಿ ಸೇರಿದಂತೆ ಅನೇಕ ಕಡೆ ದಾಳಿ ನಡೆಸಿದ್ದರು.
ನವದೆಹಲಿಯ ಫ್ಲಾಟ್ವೊಂದರಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸುಮಾರು 8.50ಕೋಟಿ ನಗದು ಸಿಕ್ಕಿತ್ತು. ಇದರ ವಿರುದ್ಧ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರ ಮೇಲೆ ದೂರು ದಾಖಲಿಸಿಕೊಂಡಿತ್ತು.
ಐಟಿ ಅಧಿಕಾರಿಗಳು ಅನೇಕ ಬಾರಿ ಡಿ.ಕೆ.ಶಿವಕುಮಾರ್ ಅವರ ಪುತ್ರಿ, ತಾಯಿ ಹಾಗೂ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಸೇರಿದಂತೆ ಮತ್ತಿತರರನ್ನು ವಿಚಾರಣೆಗೆ ಒಳಪಡಿಸಿದ್ದರು.
ಫ್ಲಾಟ್ನಲ್ಲಿ ಸಿಕ್ಕಿರುವ ಹಣ ಕೃಷಿ ಮೂಲದಿಂದ ಬಂದಿದ್ದು ಎಂದು ಶಿವಕುಮಾರ್ ಹೇಳಿದ್ದರೂ ಅಧಿಕಾರಿಗಳು ಮಾತ್ರ ಇದು ಹವಾಲ ದಂಧೆ ಎಂದೇ ದೂರು ದಾಖಲಿಸಿದ್ದರು.
ಇತ್ತೀಚೆಗಷ್ಟೇ ಬೆಂಗಳೂರಿನ ಆರ್ಥಿಕ ಅಪರಾಧ ನ್ಯಾಯಾಲಯ ಶಿವಕುಮಾರ್ ಸೇರಿದಂತೆ ಪ್ರಕರಣದ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಈ ಕಾನೂನಿನ ಸಂಕಷ್ಟದಿಂದ ಪಾರಾದರು ಎನ್ನುವಷ್ಟರಲ್ಲಿ ಇಡಿ ದೂರು ದಾಖಲಿಸಿದೆ.