ಕೊಡಗಿಗೆ ನೆರವಾಗಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ರೂ. ನೀಡುವಂತೆ ಸ್ಪೀಕರ ಮನವಿ

ಬೆಂಗಳೂರು, ಸೆ.18-ಅತಿವೃಷ್ಟಿಯಿಂದ ಹಾನಿಗೀಡಾಗಿ ಸಂಕಷ್ಟದಲ್ಲಿರುವ ಕೊಡಗಿನ ಜನರಿಗೆ ನೆರವಾಗಲು ಪ್ರತಿಯೊಬ್ಬ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ರೂ.ಗಳನ್ನು ನೀಡುವಂತೆ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಮನವಿ ಮಾಡಿದ್ದಾರೆ.

ಈ ಸಂಬಂಧ ಶಾಸಕರಿಗೆ ಪತ್ರ ಬರೆದಿರುವ ವಿಧಾನಸಭಾಧ್ಯಕ್ಷರು ಸದನದ ಎಲ್ಲಾ ಸದಸ್ಯರು ಮಾನವೀಯ ಗುಣಗಳನ್ನು ಹೊಂದಿದ್ದು, ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿರುವ ಕೊಡಗು ಜಿಲ್ಲೆಗೆ ನೆರವು ನೀಡಬೇಕು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ರೂ.ಗಳನ್ನು ನನ್ನ ಅಣ್ಣತಮ್ಮಂದಿರ ಹಾಗೂ ತಾಯಂದಿರ ನೋವು ಹಂಚಿಕೊಳ್ಳಲು ಪರಿಹಾರ ನಿಧಿಗೆ ದೇಣಿಗೆ ನೀಡಬೇಕಿರುವುದು ಕರ್ತವ್ಯವಾಗಿರುತ್ತದೆ. ಪ್ರತಿಯೊಬ್ಬ ಶಾಸಕರೂ ತಮ್ಮ ಕ್ಷೇತ್ರದ ಭೌಗೋಳಿಕ ವ್ಯಾಪ್ತಿಯನ್ನು ಮೀರಿ ಈ ಹಣ ವ್ಯಯ ಮಾಡಲು ಅಗತ್ಯವಿರುವ ತಿದ್ದುಪಡಿಯನ್ನು ಹೊರಡಿಸಲು ಸರ್ಕಾರವನ್ನು ಕೋರಲಾಗಿದೆ.

ಶಾಸಕರು ಸ್ವಯಂಪ್ರೇರಿತರಾಗಿ ಈ ಮನವಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಗೆ ಆಯ್ಕೆಯಾಗಿರುವ ರಾಜ್ಯದ ಎಲ್ಲಾ ಭಾಗಗಳ ಜನರ ನೋವಿಗೆ ಸ್ಪಂದಿಸಬೇಕಾದಂತಹ ನೈತಿಕ ಹೊಣೆ ನಮ್ಮಲ್ಲಿದೆ. ಶಾಸನ ಸಭೆಯ ಅಧಿವೇಶನ ಸಮಾವೇಶಗೊಳ್ಳುವ ಸಂಭವ ಈಗ ಸದ್ಯಕ್ಕಿಲ್ಲದ ಕಾರಣ ಪತ್ರ ಬರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಭ್ಯವಿರುವ ಎಲ್ಲಾ ಪರಿಹಾರಗಳನ್ನು ಕೊಡಲು ಸ್ಪಂದಿಸಿವೆ. ದೇಶಕ್ಕೆ ಇಬ್ಬರು ಮಹಾನ್ ದಂಡನಾಯಕರನ್ನು ನೀಡಿದ ವೀರಭೂಮಿ ಕೊಡುಗೆ ಈ ಜಿಲ್ಲೆಯಾಗಿದ್ದು, ಇಂದಿಗೂ ರಕ್ಷಣಾಪಡೆಗೆ ಅಧಿಕ ಸಂಖ್ಯೆಯಲ್ಲಿ ಸ್ವಪ್ರೇರಣೆಯಿಂದ ಮುಂದೆ ಬಂದು ಸೇರುತ್ತಿದ್ದಾರೆ.
ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೊಳಗಾಗಿರುವ ಕೊಡಗು ಜಿಲ್ಲೆಗೆ ನೆರವು ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ