ಬೆಂಗಳೂರು, ಸೆ.17- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಾಸಕಾಂಗ ಸಭೆ ಕರೆದಿರುವ ಬೆನ್ನಲ್ಲೇ ನಾಳೆ ಎಲ್ಲಾ ಶಾಸಕರು ಬೆಂಗಳೂರಿಗೆ ಆಗಮಿಸಬೇಕೆಂದು ತುರ್ತು ಬುಲಾವ್ ನೀಡಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು, ನಾಳೆ ಸಂಜೆಯೊಳಗಾಗಿ ಕಡ್ಡಾಯವಾಗಿ ಎಲ್ಲಾ ಬಿಜೆಪಿ ಶಾಸಕರು ನಗರದಲ್ಲಿ ಹಾಜರಿರಬೇಕೆಂದು ಸೂಚಿಸಲಾಗಿದೆ.
ವಿಧಾನಸಭೆಯ ಮುಖ್ಯಸಚೇತಕ ವಿ.ಸುನೀಲ್ಕುಮಾರ್ ಮೂಲಕ ಸೂಚನೆ ನೀಡಿರುವ ಬಿಎಸ್ವೈ, ಎಲ್ಲಾ ಶಾಸಕರು ಮಂಗಳವಾರ ಸಂಜೆಯೊಳಗೆ ನಗರದಲ್ಲಿರಬೇಕು. ಯಾವುದೇ ಪರಿಸ್ಥಿತಿ ಬಂದರೂ ಸನ್ನದ್ಧರಾಗಬೇಕೆಂದು ಸೂಚಿಸಿರುವುದಾಗಿ ತಿಳಿದು ಬಂದಿದೆ.
ಸರ್ಕಾರ ರಚಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಏಕಾಏಕಿ ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಬರುವಂತೆ ಸೂಚನೆ ಕೊಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಶಾಸಕಾಂಗ ಸಭೆ ಮುಗಿದ ಬಳಿಕ ಬಹುತೇಕ ಎಲ್ಲಾ ಶಾಸಕರು ಗೋವಾ ಭಾಗದಲ್ಲಿರುವ ರೆಸಾರ್ಟ್ವೊಂದಕ್ಕೆ ಕರೆದೊಯ್ಯಲು ಸಿದ್ದತೆ ನಡೆಸಲಾಗಿದೆ.ಮೂಲಗಳ ಪ್ರಕಾರ ಶಾಸಕರಿಗೆ ಬರುವಾಗ ತಮ್ಮ ಅಗತ್ಯ ದಿನಚರಿ ವಸ್ತುಗಳನ್ನು ತರುವಂತೆ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.