ಬಿಬಿಎಂಪಿಯಲ್ಲಿ ಪಕ್ಷೇತರರೆ ಕಿಂಗ್‍ಮೇಕರ್ಸ್

ಬೆಂಗಳೂರು, ಸೆ.16- ಬಿಬಿಎಂಪಿ ಮೇಯರ್ ಚುನಾವಣೆಗೆ ಸೆ.28ರಂದು ದಿನಾಂಕ ನಿಗದಿಯಾದಂದಿನಿಂದ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಯಾರೇ ಅಧಿಕಾರ ಹಿಡಿಯಬೇಕಾದರೂ ಪಕ್ಷೇತರರ ಬೆಂಬಲ ಅಗತ್ಯವಿರುವುದರಿಂದ ಪಕ್ಷೇತರರಿಗೆ ಭಾರಿ ಡಿಮ್ಯಾಂಡ್ ಉಂಟಾಗಿದೆ.
ಬಿಜೆಪಿಯಿಂದ ಮೇಯರ್ ಆಯ್ಕೆಯಾಗಬೇಕಾದರೆ 7 ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಇಬ್ಬರು ಪಕ್ಷೇತರ ಬೆಂಬಲ ಅಗತ್ಯವಿದೆ. ಹಾಗಾಗಿ ಪಕ್ಷೇತರ ಕೌನ್ಸಿಲರ್‍ಗಳು ಇಲ್ಲಿ ನಿರ್ಣಾಯಕರಾಗಿದ್ದಾರೆ. ಪ್ರಸ್ತುತ ಬಿಬಿಎಂಪಿಯಲ್ಲಿ ಒಟ್ಟು 8 ಪಕ್ಷೇತರ ಸದಸ್ಯರಿದ್ದಾರೆ.
ಎರಡೂ ಕಡೆಯವರಿಗೂ ತಮ್ಮ ಬೆಂಬಲ ಬೇಕಾಗಿರುವುದನ್ನು ಮನಗಂಡಿರುವ ಪಕ್ಷೇತರ ಶಾಸಕರು ಕೂಡ ತಮ್ಮ ಬೇಳೆಬೇಯಿಸಿಕೊಳ್ಳಲು ಮುಂದಾಗಿದ್ದು, ಎರಡೂ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಮೊದಲು ಬಿಜೆಪಿಯೊಂದಿಗೆ ಮಾತುಕತೆ ನಡೆಸಿದ್ದ ಪಕ್ಷೇತರರು ಇದೀಗ ಕಾಂಗ್ರೆಸ್‍ನೊಂದಿಗೆ ಕಾಣಿಸಿಕೊಂಡಿದ್ದಾರೆ.ಪಕ್ಷೇತರರ ಈ ನಡೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮುಸುಕಿನ ಗುದ್ದಾಟ ಹಾಗೂ ಆರೋಪ-ಪತ್ಯಾರೋಪಗಳಿಗೆ ಕಾರಣವಾಗಿದೆ.
ಅಧಿಕಾರ ಹಿಡಿಯಲು ಬಿಜೆಪಿಯವರು ಪಕ್ಷೇತರರಿಗೆ ಆಮಿಷ ಒಡ್ಡುತ್ತಿದ್ದಾರೆ.ಪಕ್ಷೇತರರನ್ನು ವಿದೇಶಕ್ಕೆ ಕರೆದೊಯ್ಯಲು ಬಿಜೆಪಿ ಪ್ರಯತ್ನಿಸಿತ್ತು ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿಯವರು ಪಕ್ಷೇತರರಿಗೆ ಬಿಜೆಪಿ ಆಮಿಷ ಒಡ್ಡಿಲ್ಲ. ಯಾರು ಆಮಿಷ ಒಡ್ಡಿದ್ದಾರೆ ಎಂಬುದರ ಬಗ್ಗೆ ಧರ್ಮಸ್ಥಳದ ಶ್ರೀ ಮಂಜುನಾಥ ದೇವರ ಎದುರು ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದ್ದಾರೆ.

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿ, ನಾವು ಪಕ್ಷೇತರರಿಗೆ ಗಾಳ ಹಾಕಿಲ್ಲ. ಪಕ್ಷೇತರ 6 ಸದಸ್ಯರು ನಮ್ಮಲ್ಲಿಗೆ ಬಂದು, ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಆದರೆ ಅವರು ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಸರಿಯಾದ ಸಹಕಾರ ನೀಡಿಲ್ಲ ಎಂದು ಹೇಳಿದ್ದರಿಂದ ನಾವು ಅವರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೆವು. ನಾವಾಗಿಯೇ ಅವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‍ನವರೇ ಕಳೆದ ಮೂರು ವರ್ಷಗಳಲ್ಲಿ ಪಕ್ಷೇತರರನ್ನು ಕೇರಳ, ಗೋವಾ ಮತ್ತಿತರ ರಾಜ್ಯಗಳಿಗೆ ಕರೆದೊಯ್ದು ಮೋಜು ಮಸ್ತಿ ಮಾಡಿಸಿದ್ದಾರೆ.ಇಂತಹ ಕೆಲಸವನ್ನು ನಾವು ಮಾಡಿಲ್ಲ. ಯಾರು ಆಮಿಷ ಒಡ್ಡಿದ್ದಾರೆ ಎಂಬುದು ಧರ್ಮಸ್ಥಳದಲ್ಲಿ ತೀರ್ಮಾನವಾಗಲಿ.ಬಿಬಿಎಂಪಿಯಲ್ಲಿ ನಾವೇ ಮೊದಲ ರ್ಯಾಂಕ್ ಪಡೆದಿದ್ದೇವೆ ಎಂದು ಹೇಳಿದ್ದಾರೆ.

ಇದಕ್ಕೆ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿರುವ ಆಡಳಿತ ಪಕ್ಷದ ನಾಯಕ ಶಿವರಾಜ್, ಜನಪ್ರತಿನಿಧಿ ಕಾಯ್ದೆಯಲ್ಲಿ ಫಸ್ಟ್ ರ್ಯಾಂಕ್ ಎಂಬುದು ಮುಖ್ಯವಲ್ಲ. ಇಲ್ಲಿ ಮ್ಯಾಜಿಕ್ ಸಂಖ್ಯೆ ಮಾತ್ರ ಮುಖ್ಯ. ನಮ್ಮಲ್ಲಿ ಅಗತ್ಯ ಸಂಖ್ಯಾ ಬಲ ಇದೆ.ಈಗಾಗಲೇ ಪಕ್ಷೇತರರು ಕಾಂಗ್ರೆಸ್ ಮೇಯರ್‍ಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.ಅವರೆಲ್ಲರನ್ನೂ ನಾವು ಒಟ್ಟಾಗಿ ಇರಿಸಿಕೊಂಡಿದ್ದೇವೆ ಎಂದು ತಿಳಿಸಿರು.
ಬಿಜೆಪಿಗೆ ಅಡ್ಡ ಮತದಾನ ಭೀತಿ
ಮೇಯರ್ ಮತದಾನಕ್ಕೆ ಒಟ್ಟು 259 ಮತಗಳಿವೆ. ಶಾಸಕ, ವಿಧಾನ ಪರಿಷತ ಸದಸ್ಯ, ಲೋಕಸಭಾ ಸದಸ್ಯರು ಸೇರಿ ಮೇಯರ್ ಆಯ್ಕೆಯಾಗಬೇಕಾದರೆ 130 ಸ್ಥಾನಗಳು ಬೇಕಾಗುತ್ತವೆ.ಪ್ರಸ್ತುತ ಬಿಜೆಪಿಯಲ್ಲಿ ಎಂಪಿ, ಎಂಎಲ್‍ಎ, ಎಂಎಲ್‍ಸಿ ಸೇರಿ 123 ಸ್ಥಾನಗಳಿವೆ. ಕಾಂಗ್ರೆಸ್-ಜೆಡಿಎಸ್‍ನಲ್ಲಿ 128 ಸ್ಥಾನಗಳಿವೆ. ಅಧಿಕಾರ ಹಿಡಿಯಲು ಬಿಜೆಪಿಗೆ 7 ಮತ್ತು ಮೃತ್ರಿ ಕೂಟಕ್ಕೆ 2 ಸ್ಥಾನಗಳ ಕೊರತೆ ಇದೆ.ಹೀಗಾಗಿ ಪಕ್ಷೇತರರ ಮತ ಇಲ್ಲಿ ಅಗತ್ಯವಾಗಿ ಬೇಕಾಗಿದೆ.
ಈ ಮಧ್ಯೆ ಬಿಜೆಪಿಯಲ್ಲಿ ಈ ಬಾರಿ ಅಡ್ಡ ಮತದಾನ ಆಗುವ ಸಾಧ್ಯತೆ ಇದೆ. ಭೆರ ಸಂದ್ರ ವಾರ್ಡ್‍ನ ಬಿಜೆಪಿಯ ಕೌನ್ಸಿಲರ್ ಎನ್.ನಾಗರಾಜ್ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್‍ನ ಸೌಮ್ಯರೆಡ್ಡಿ ಪರವಾಗಿ ಪ್ರಚಾರ ನಡೆಸಿದ್ದರು. ರಾಮಲಿಂಗಾ ರೆಡ್ಡಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅವರು ಈ ಬಾರಿ ಮೇಯರ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡುವ ಸಾಧ್ಯತೆ ಇದೆ.

ಇನ್ನು ಗಂಗೇನಹಳ್ಳಿ ವಾರ್ಡ್‍ನ ಎಂ.ನಾಗರಾಜ್ ಅವರು ಪಕ್ಷದ ನಾಯಕರ ನಡೆಯಿಂದ ಅಸಮಾಧಾನ ಹೊಂದಿದ್ದು, ಹಿರಿತನಕ್ಕೆ ಬೆಲೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಅವರು ಕೂಡ ಅಡ್ಡಮತದಾನ ಮಾಡುವ ಸಾಧ್ಯತೆ ಇದೆ.
ರಾಜಾಜಿನಗರದ ದಯಾನಂದನಗರ ವಾರ್ಡ್‍ನ ಕುಮಾರಿ ಪಳನಿಕಾಂತ್ ಅವರು ಶಾಸಕ ಸುರೇಶ್ ಕುಮಾರ್ ಅವರೊಂದಿಗೆ ಮುನಿಸಿಕೊಂಡಿದ್ದು, ಅವರು ಅಡ್ಡಮತದಾನ ಮಾಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಜ್ಞಾತ ಸ್ಥಳಕ್ಕೆ ಪಕ್ಷೇತರರು
8 ಪಕ್ಷೇತರರ ಪೈಕಿ 7 ಮಂದಿ ಇಂದು ಗೋವಾಕ್ಕೆ ಪ್ರವಾಸ ಹೋಗಬೇಕಾಗಿತ್ತು.ಆದರೆ ಗೋವಾದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಏನಾದರೂ ಸಮಸ್ಯೆಯಾಗಬಹುದು ಎಂಬ ಭಯದಿಂದ ಅಲ್ಲಿಗೆ ಹೋಗುವ ಪ್ರವಾಸವನ್ನು ಕೈಬಿಡಲಾಗಿದೆ.ನಾಳೆ ಮತ್ತೊಂದು ಅಜ್ಞಾನ ಸ್ಥಳ ಹುಡುಕಿ ಅಲ್ಲಿಗೆ ಅವರನ್ನು ಸ್ಥಳಾಂತರಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.ಅಜ್ಞಾನ ಸ್ಥಳದಿಂದ ಪಕ್ಷೇತರರು ನೇರವಾಗಿ ಬಿಬಿಎಂಪಿ ಚುನಾವಣೆಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ