ದೇಶ ನಿರ್ಮಾಣದಲ್ಲಿ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರ ಪಾತ್ರ ಪ್ರಮುಖ: ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್

ಬೆಳಗಾವಿ, ಸೆ.15- ದೇಶ ನಿರ್ಮಾಣದಲ್ಲಿ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಹೇಳಿದರು.
ಬೆಳಗಾವಿಯಲ್ಲಿಂದು ಕರ್ನಾಟಕ ಕಾನೂನು ಸಂಸ್ಥೆಯ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆ ಕಾನೂನು ಸುವ್ಯವಸ್ಥೆಯ ತಳಹದಿ. ವಕೀಲರು ಜನಸಾಮಾನ್ಯರಿಗೆ ನ್ಯಾಯ ಕೊಡಿಸುವಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಸಮಾಜದ ಒಳಿತಿಗಾಗಿ ನ್ಯಾಯಾಂಗದ ಪಾತ್ರ ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಿದ್ದೇನೆ. ಅಪಾರ ಸಂತೋಷವಾಗಿದೆ ಎಂದ ರಾಷ್ಟ್ರಪತಿಯವರು, ಬೆಳಗಾವಿ ಕೈಗಾರಿಕೋದ್ಯಮದ ಹೆಬ್ಬಾಗಿಲು ಎಂದರು.
ವಿಮಾನದ ಬಿಡಿಭಾಗಗಳು ಬೆಳಗಾವಿಯಲ್ಲಿ ತಯಾರಾಗುತ್ತಿರುವುದು ದೇಶದ ಹೆಮ್ಮೆ. ದೇಶ ನಿರ್ಮಾಣದಲ್ಲಿ ಬೆಳಗಾವಿಯ ಕೊಡುಗೆ ಅಪಾರವಾಗಿದೆ. ಇಲ್ಲಿ ಸ್ವಾಮಿ ವಿವೇಕಾನಂದರು ಭೇಟಿ ನೀಡಿದ್ದರು ಎಂಬುದು ಧನ್ಯತಾ ಭಾವ ಮೂಡಿಸುತ್ತದೆ ಎಂದು ತಿಳಿಸಿದರು.

1939ರಲ್ಲಿ ಸ್ಥಾಪನೆಯಾದ ಕರ್ನಾಟಕ ಕಾನೂನು ಸಂಸ್ಥೆ ಸುಮಾರು 14 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, 1400ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಪ್ರತಿವರ್ಷ ರಾಷ್ಟ್ರೀಯ ವಾದಿಗಳು, ಸಾಮಾಜಿಕ ಬದ್ಧತೆಯಿರುವ ವಕೀಲರು ಹೊರ ಬರುತ್ತಿದ್ದಾರೆ. ಇಲ್ಲಿ ಕಲಿತ ಕಾನೂನು ವಿದ್ಯಾರ್ಥಿಗಳು ದೇಶಾದ್ಯಂತ ಉತ್ತಮ ಹೆಸರು ಮಾಡಿದ್ದಾರೆ ಎಂದು ಅವರು ಕೊಂಡಾಡಿದರು.

ಜೆನಿಟಿಕ್ ಇಂಜಿನಿಯರ್, ಬಯೋ ಎಥಿಕ್ಸ್‍ನಂತೆ ಕಾನೂನು ವಲಯದಲ್ಲೂ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಅದಕ್ಕೆ ಸಜ್ಜುಗೊಳ್ಳಲು ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ತಯಾರು ಮಾಡಬೇಕು. ನಮ್ಮ ಶಿಕ್ಷಣ ಸಂಸ್ಥೆಗಳು 21ನೇ ಶತಮಾನದ ಸವಾಲುಗಳಿಗೆ ಮುಖಾಮುಖಿಯಾಗಬೇಕು. ಆ ಹಿನ್ನೆಲೆಯಲ್ಲಿ ತಮ್ಮ ಕಾರ್ಯಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸುವ ಪ್ರಯತ್ನಗಳಾಗಬೇಕು ಎಂದು ಹೇಳಿದರು.
ವಕೀಲಗಾರಿಕೆ ಎಂಬುದು ವೃತ್ತಿಯಲ್ಲ. ಅದೊಂದು ಜೀವನ ಕ್ರಮ. ಸಾಮಾನ್ಯರಿಗೆ ಅನ್ಯಾಯವಾದಾಗ ನೆರವು ನೀಡುವ ಧರ್ಮ. ಸಮಾಜ ಕಟ್ಟುವ ಕಾಯಕ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ದೀಪಕ್‍ಮಿಶ್ರ ಅವರು ನಿವೃತ್ತಿಯಾಗುತ್ತಿದ್ದು,ಅವರ ಮುಂದಿನ ಜೀವನ ಸುಖಕರವಾಗಿರಲಿ. ರಾಷ್ಟ್ರಪತಿ ಭವನಕ್ಕೆ ಕಾನೂನು ಸಲಹೆ ಅಗತ್ಯವಾದ ಸಂದರ್ಭದಲ್ಲಿ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ