ಕೋಲಾರ: ಕೋಲಾರದ ಮಾಲೂರು ಪಟ್ಟಣದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಯತ್ನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 13 ದಿನಗಳಲ್ಲೇ ಪ್ರಕರಣವನ್ನು ಇತ್ಯರ್ಥಗೊಳಿಸಿರುವ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಕೋಲಾರದ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್.ರೇಖಾ, ಅಪರಾಧಿ ಸುರೇಶ್ ಬಾಬು ತಪ್ಪಿತಸ್ಥ ಎಂದು ಪ್ರಕಟಿಸಿದ್ದು, ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ. ಈ ಮೂಲಕ ಘಟನೆ ನಡೆದು ಕೇವಲ 45 ದಿನಗಳಲ್ಲಿಯೇ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಪ್ರಕರಣ ಮುಕ್ತಾಯಗೊಳಿಸಿದ್ದಾರೆ.
ಈ ಮೂಲಕ ಅಪ್ರಾಪ್ತ ಬಾಲಕಿ ಅತ್ಯಾಚಾರ ಹಾಗೂ ಕೊಲೆಯಂತಹ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿಮಾಡಿ, ದೇಶದ ಇತಿಹಾಸದಲ್ಲೇ ಅತಿ ಶೀಘ್ರವಾಗಿ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ ನ್ಯಾಯಾಲಯ ಎಂಬ ಹೆಗ್ಗಳಿಕೆಗೆ ಕೋಲಾರದ ನ್ಯಾಯಾಲಯ ಪಾತ್ರವಾಗಿದೆ.
ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ನೀಡಿರುವ ಈ ಮಹತ್ವದ ತೀರ್ಪು ಅತ್ಯಾಚಾರಿಗಳಿಗೊಂದು ಪಾಠವಾಗಿದೆ.
ಆಗಸ್ಟ್ 1 ರಂದು ರಕ್ಷಿತಾ ಎಂಬ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗಳು ಆಕೆಯನ್ನು ಕೊಲೆಮಾಡಿ ಮಾಲೂರಿನ ರೈಲ್ವೆ ಟ್ರಾಕ್ ಬಳಿ ಬಿಸಾಡಿ ಹೋಗಿದ್ದರು. ರಕ್ಷಿತಾ ಕೊಲೆಗೆ ಜಿಲ್ಲೆ ಸೇರಿದಂತೆ ರಾಜ್ಯಾಧ್ಯಂತ ಪ್ರತಿಭಟನೆಗಳು ನಡೆದಿದ್ದವು.