ಬೆಂಗಳೂರು, ಸೆ.14- ಸಂಪುಟ ವಿಸ್ತರಣೆಯೂ ಇಲ್ಲ, ನಿಗಮ ಮಂಡಳಿಗಳಿಗೆ ನೇಮಕವೂ ಸದ್ಯಕ್ಕಿಲ್ಲ. ಲೋಕಸಭೆ ಚುನಾವಣೆವರೆಗೆ ಯಾವುದೂ ನಡೆಯುವ ಸಾಧ್ಯತೆ, ಲಕ್ಷಣಗಳು ಕಂಡುಬರುತ್ತಿಲ್ಲ.
ಪ್ರಸ್ತುತ ತಿಂಗಳಾಂತ್ಯದಲ್ಲಿ ಸಂಪುಟ ವಿಸ್ತರಣೆ ನಂತರ ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿತ್ತಾದರೂ ಸದ್ಯ ಕಾಂಗ್ರೆಸ್ನಲ್ಲಿ ಭುಗಿಲೆದ್ದಿರುವ ಭಿನ್ನಮತ ಬಗೆಹರಿಯುವವರೆಗೆ ಸಂಪುಟ ವಿಸ್ತರಣೆಗೆ ಬ್ರೇಕ್ ಹಾಕುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಹಾಗಾಗಿ ಇನ್ನೂ ಒಂದು ತಿಂಗಳು ಸಂಪುಟ ವಿಸ್ತರಣೆಗೆ ತಾತ್ಕಾಲಿಕ ಬ್ರೇಕ್ ಬೀಳಲಿದೆ.
ನಂತರ ಪಿತೃಪಕ್ಷ ಪ್ರಾರಂಭವಾಗಲಿದ್ದು, ಆ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇಲ್ಲ. ಅಲ್ಲದೆ, ವಿಧಾನ ಪರಿಷತ್ ಉಪ ಚುನಾವಣೆ ಮತ್ತು ಮೇಯರ್ ಚುನಾವಣೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕಾತಿ ಬೇಡ ಎಂದು ಕಾಂಗ್ರೆಸ್ನ ಹಲವು ಹಿರಿಯ ನಾಯಕರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆಯಾದರೂ ಇದು ಲೋಕಸಭೆ ಚುನಾವಣೆವರೆಗೆ ವಿಳಂಬವಾಗುವ ಸಾಧ್ಯತೆ ಇದ್ದು, ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ ಮೂಡಿಸಲಾರಂಭಿಸಿದೆ.
ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳಲ್ಲಿ ಕಾಂಗ್ರೆಸ್ನಿಂದ ಆರು, ಜೆಡಿಎಸ್ನಿಂದ ಒಬ್ಬರನ್ನು ನೇಮಕ ಮಾಡುವುದಾಗಿ ತೀರ್ಮಾನಿಸಲಾಗಿತ್ತು. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು.
ಇದಾದ ನಂತರ ಬೆಳಗಾವಿಯಲ್ಲಿ ಉಂಟಾದ ಕಾಂಗ್ರೆಸ್ ಭಿನ್ನಮತ, ಅಸಮಾಧಾನ, ಅತೃಪ್ತಿ ವಿಭಿನ್ನ ರಾಜಕೀಯ ತಿರುವುಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ ಹೈಕಮಾಂಡ್ ಆ ಪರಿಸ್ಥಿತಿ ನಿಭಾಯಿಸಲು ಹೈರಾಣಾಯಿತು.
ಸದ್ಯದ ಸ್ಥಿತಿಯಲ್ಲಿ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿಗೆ ಕೈ ಹಾಕಿದರೆ ಭಿನ್ನಮತದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆಕಾಂಕ್ಷಿಗಳು ಭಾರೀ ಸಂಖ್ಯೆಯಲ್ಲಿರುವುದರಿಂದ ಎಲ್ಲರನ್ನೂ ತೃಪ್ತಿಗೊಳಿಸಲು ಸಾಧ್ಯವಾಗದ ಪರಿಸ್ಥಿತಿಯಿಂದಾಗಿ ಈಗ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಜೇನುಗೂಡಿಗೆ ಕಲ್ಲು ಹೊಡೆದಂತಾಗುತ್ತದೆ. ಯಾವುದಾದರೂ ನೆಪದ ಮೂಲಕ ಮುಂದೂಡುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಹೀಗಾಗಿ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ನೆನೆಗುದಿಗೆ ಬೀಳುವ ಸಾಧ್ಯತೆ ಇದೆ. ಈ ಹಿಂದೆ ಉತ್ತರ ಕರ್ನಾಟಕದಿಂದ ಇಬ್ಬರು ಲಿಂಗಾಯತ ಪ್ರಭಾವಿ ಶಾಸಕರನ್ನು ಹಾಗೂ ಹಿಂದುಳಿದ, ರೆಡ್ಡಿ ಸಮುದಾಯ ಮತ್ತು ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ, ಸದ್ಯದ ರಾಜಕೀಯ ಪರಿಸ್ಥಿತಿ ಗಮನಿಸಿದರೆ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಕ್ಷೀಣಿಸಿದಂತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿದ್ದು, ಇದೇ 16ರಂದು ಹಿಂದಿರುಗಲಿದ್ದಾರೆ. ಸಚಿವಾಕಾಂಕ್ಷಿಗಳು ಅವರೊಂದಿಗೂ ಕೂಡ ಚರ್ಚಿಸುವ ಸಾಧ್ಯತೆ ಇದೆ.
ಹೈಕಮಾಂಡ್ ಕೂಡ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಿಎಲ್ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸುವ ಪ್ರಯತ್ನ ನಡೆಸಿದ್ದಾರೆ. ಇನ್ನೂ ಹಲವರು ಸಂಪುಟಕ್ಕೆ ಸೇರ್ಪಡೆಯಾಗುವ ಪ್ರಯತ್ನ ತೀವ್ರಗೊಳಿಸಿದ್ದಾರೆ.
ಈ ನಡುವೆ ಸಂಪುಟ ವಿಸ್ತರಣೆಗೆ ಬ್ರೇಕ್ ಹಾಕುವ ತೀರ್ಮಾನಕ್ಕೆ ಹೈಕಮಾಂಡ್ ಬಂದಂತಿದೆ. ಭಿನ್ನಮತದ ಬೆಂಕಿಯಲ್ಲಿ ಬೇಯುತ್ತಿರುವ ಕಾಂಗ್ರೆಸ್ಗೆ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಮುಂದೂಡಿಕೆ ಎಂಬ ತುಪ್ಪ ಸುರಿದಂತಾಗಿದೆ. ಮುಂದೇನಾಗುತ್ತದೆಯೋ ಕಾದು ನೋಡಬೇಕು.