ಹರ್ಯಾಣದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್: ಕೇಂದ್ರದ ವಿರುದ್ಧ ಸಂತ್ರಸ್ತೆಯ ತಾಯಿ ಆಕ್ರೋಶ

ಮಹೇಂದ್ರಗಢ: 2018ನೇ ಸಾಲಿನ ಸಿಬಿಎಸ್ ಇ ಪರೀಕ್ಷೆಯಲ್ಲಿ ದೇಶಕ್ಕೆ ಅಗ್ರ ಸ್ಥಾನ ಪಡೆದಿದ್ದ ಹರ್ಯಾಣ ಮೂಲದ ಯುವತಿಯನ್ನು ಅಪಹರಿಸಿದ ಕಾಮುಕರು ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಸಂತ್ರಸ್ತೆಯ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳಿಗೆ ಪ್ರಧಾನಿ ಮೋದಿನ್ಯಾಯ ದೊರಕಿಸಿ ಕೊಡಬೇಕು. ಮೋದಿಯವರ ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇಂತಹ ಕೃತ್ಯಗಳು ನಡೆಯುತ್ತಿರುವಾಗ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ದಯವಿಟ್ಟು ನನ್ನ ಮಗಳಿಗೆ ನ್ಯಾಯ ಕೊಡಿಸಲು ಸಹಾಯ ಮಾಡಿ. ಹರಿಯಾಣ ರಾಜ್ಯದಲ್ಲಿ ಟಾಪರ್ ಆಗಿದ್ದ ನನ್ನ ಮಗಳಿಗೆ ಗಣರಾಜ್ಯೋತ್ಸವ ದಿನದಂದು ಸನ್ಮಾನ ಮಾಡಲಾಗಿತ್ತು. ಇದೀಗ ನಾವು ಏನು ಮಾಡುವುದು? ಮೋದಿಯವರೇಕೆ ನಮ್ಮ ದನಿಯನ್ನು ಕೇಳಿಸಿಕೊಳ್ಳುತ್ತಿಲ್ಲ? ಆರೋಪಿಗಳು ಇಂದು ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಇನ್ನು ಅತ್ಯಾಚಾರಿಗಳ ವಿರುದ್ಧ ಗ್ರಾಮಸ್ಥರು ಏನನ್ನೂ ಮಾತನಾಡುತ್ತಿಲ್ಲ. ಪೊಲೀಸರು ಕೂಡ ನಮ್ಮ ಮಾತನ್ನು ಕೇಳುತ್ತಿಲ್ಲ. ಆರೋಪಿಗಳು ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ. ಸರ್ಕಾರವಾಗಲೀ ಅಥವಾ ಪೊಲೀಸರಾಗಲೀ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.

ಘಟನೆ ನಡೆದು 15-16 ಗಂಟೆಗಳಾಗಿವೆ. ಆದರೂ ಆರೋಪಿಗಳ ವಿರುದ್ಧ ಈವರೆಗೂ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಸಿಬಿಎಸ್‌ಇ ಪರೀಕ್ಷೆಯಲ್ಲಿ ದೇಶಕ್ಕೇ ಟಾಪರ್ ಆಗಿ, ರಾಷ್ಟ್ರಪತಿಗಳಿಂದ ಸನ್ಮಾನ ಸ್ವೀಕರಿಸಿದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಗುರಗಾಂವ್ ನಿಂದ 116 ಕಿಲೋಮೀಟರ್ ದೂರದ ಬಸ್‌ ನಿಲ್ದಾಣವೊಂದರಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಳು. ಕೂಡಲೇ ಸ್ಥಳೀಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ