ಬೆಂಗಳೂರು, ಸೆ.12-ವಿಷ್ಣು ಸೇನಾ ಸಮಿತಿ ವತಿಯಿಂದ ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವವನ್ನು ಸೆ.16 ರಿಂದ 18ರವರೆಗೆ ವಿ.ವಿ.ಪುರಂನ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕುವೆಂಪು ಕಲಾಕ್ಷೇತ್ರದವರೆಗೆ ಬೃಹತ್ ಮೆರವಣಿಗೆ ಏರ್ಪಡಿಸಲಾಗಿದ್ದು ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದರು.
ಅಲ್ಲದೆ ಸಿನಿಮಾ ಕಲಾವಿದರು ಹಾಗೂ 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ ವಹಿಸಲಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಡಾ.ವಿಷ್ಣುವರ್ಧನ್ ಅವರ ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ 30 ಜಿಲ್ಲೆಗಳಲ್ಲಿ ಡಾ.ವಿಷ್ಣು ಜಯಂತಿ ಆಚರಿಸಲಾಗುತ್ತಿದೆ. ಉತ್ಸವದಲ್ಲಿ ಕಿರು ಚಿತ್ರೋತ್ಸವ ಸ್ಪರ್ಧೆ ಆಯೋಜಿಸಿದ್ದು, 50ಕ್ಕೂ ಹೆಚ್ಚು ಕಿರುಚಿತ್ರಗಳು ಪ್ರದರ್ಶನಕ್ಕೆ ನೋಂದಾಯಿಸಿಕೊಂಡಿವೆ. ವಿಜೇತ ಚಿತ್ರವೊಂದಕ್ಕೆ 25 ಸಾವಿರ ರೂ.ನಗದು ಬಹುಮಾನ ನೀಡುವುದಾಗಿ ಹೇಳಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಡಾ.ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ನಟಿ ವಿನಯ್ಪ್ರಕಾಶ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಜೋಗಿ, ಸದಾಶಿವಶೆಣೈ, ಮನು ಅವರು ಬರೆದಿರುವ ಮೂರು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಈ ಕಾರ್ಯಕ್ರಮದಲ್ಲಿ ಸಾಹಿತಿಗಳು, ಕನ್ನಡಪರ ಚಿಂತಕರು ಮಾತ್ರವಲ್ಲದೆ, ಅಮೆರಿಕಾ, ಆಸ್ಟ್ರೇಲಿಯಾದಿಂದ ವಿಷ್ಣು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.