ದಲಿತ ಪದ ಹೆಮ್ಮೆ ಅವಮಾನವಲ್ಲ

ಬೆಂಗಳೂರು, ಸೆ.12- ದಲಿತ ಪದ ಬಳಕೆ ಮಾಡುವುದನ್ನು ವಿರೋಧಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ದುರದೃಷ್ಟಕರ. ದಲಿತ ಎಂಬ ಪದ ನಮಗೆ ಅವಮಾನವಲ್ಲ, ಅದು ನಮ್ಮ ಹೆಮ್ಮೆ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದ್ದಾರೆ.
ನಗರದಲ್ಲಿಂದು ಸಮತಾ ಸೈನಿಕ ದಳ ಆಯೋಜಿಸಿದ್ದ, ದಲಿತ ಪದ ಬಳಕೆ ವಿವಾದ- ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ದಲಿತ ಪದಗಳನ್ನು ಸರ್ಕಾರಿ ಮತ್ತು ಸಾರ್ವಜನಿಕ ಸಂವಹನಗಳಿಂದ ತೆಗೆದು ಹಾಕುವ ಮೂಲಕ ದಲಿತ ಅಸ್ಮಿತೆಯನ್ನು ಇಲ್ಲವಾಗಿಸುವ ಪ್ರಯತ್ನ ನಡೆಯುತ್ತಿದೆ. ಈ ಪದ ನಮಗೆ ಅವಮಾನವಾಗಿ ಇದುವರೆಗೆ ಕಂಡಿಲ್ಲ. ದಲಿತ ಎಂದರೆ ನಮಗೆ ಹೆಮ್ಮೆಯಾಗುತ್ತದೆ. ಆದರೆ ಇತರರಿಗೆ ಇದರಿಂದ ಕಿರಿಕಿರಿಯಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು. ದಲಿತ ಪದ ಬಳಕೆ ತಪ್ಪು ಎನ್ನುವ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದಲಿತ ಪದ ಇಲ್ಲದೆ, ಯಾವುದೇ ಹೋರಾಟ ಇಲ್ಲ. ಈ ಹಿಂದೆಯೂ, ಹರಿಜನ ಪದದ ವಿರುದ್ಧ ಬಹುದೊಡ್ಡ ಹೋರಾಟ ನಡೆಸಲಾಗಿತ್ತು. ದಲಿತ ಎಂಬ ಪದ ನವೆÅ್ಮಲ್ಲರನ್ನು ಒಗ್ಗಟ್ಟಾಗಿಸಿದೆ ಮತ್ತು ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ಹೇಳಿದರು.
ದಲಿತ ಪದ ಬಳಕೆ ಮಾಡುವುದು ತಪ್ಪಲ್ಲ . ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪದಗಳನ್ನು ಸರ್ಕಾರದ ದಾಖಲಾತಿಗಳಲ್ಲಿ ಬಳಕೆ ಮಾಡಲಾಗುತ್ತಿದೆ. ದಲಿತ ಪದ ಬಳಕೆ ಮಾಡಬೇಕು ಎಂದು ಒತ್ತಾಯಿಸಿ ಆರ್‍ಪಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ಎಂದು ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ತಿಳಿಸಿದ್ದಾರೆ ಎಂದರು.

ಪಶುವೈದ್ಯ ವಿವಿಯ ಪ್ರಾಧ್ಯಾಪಕ ಡಾ.ಎಂ.ನಾರಾಯಣ ಸ್ವಾಮಿ ಮಾತನಾಡಿ, ದೇಶದ ಸಂವಿಧಾನದಲ್ಲಿ ಎಲ್ಲಿಯೂ ದಲಿತ ಎಂಬ ಪದ ಬಳಕೆಯಾಗಿಲ್ಲ. ಆದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಪದವನ್ನು ತಮ್ಮ ಪತ್ರ ವ್ಯವಹಾರಗಳಲ್ಲಿ ಬಳಸಕೂಡದು ಎಂದು ಮಧ್ಯ ಪ್ರದೇಶ ಹೈಕೋರ್ಟ್ ಹೇಳಿದೆ. ಅದೇ ರೀತಿ, ಮುಂಬೈ ಕೋರ್ಟ್, ಮಾಧ್ಯಮಗಳಲ್ಲಿ ದಲಿತ ಪದ ಬಳಕೆ ಮಾಡಬಾರದು ಎಂದಿದೆ. ಆದರೆ, ಈ ಪದ ಸಮಾಜದಲ್ಲಿ ದಟ್ಟವಾಗಿ ಬೆಳೆದಿದ್ದು, ಇದು ಜಾತಿ ಪದವಲ್ಲ, ಹೋರಾಟದ ಪ್ರತಿರೂಪವಾಗಿದೆ. ಅಷ್ಟೇ ಅಲ್ಲದೆ,ಜಾತಿ ನಿಂದನೆ ಬದಲಾಗಿ, ದಲಿತ ಪದ ಬಳಕೆ ಮಾಡಲಾಗುತ್ತಿದೆ. ಹೀಗಾಗಿ, ಇದನ್ನು ಕೈಬಿಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಸಂವಾದದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಅಧ್ಯಕ್ಷ ಅನಂತರಾಯಪ್ಪ, ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ.ಎಂ.ಸುಮಿತ್ರಾ, ದಲಿತ ಸಂಘರ್ಷ ಸಮಿತಿ ಮುಖಂಡ ತಿಮ್ಮಯ್ಯ, ಡಾ.ಎಚ್.ಆರ್. ಸುರೇಂದ್ರ, ಎಂ.ಶ್ರೀನಿವಾಸ್ ಸೇರಿದಂತೆ ಪ್ರಮುಖರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ