ಬೆಂಗಳೂರು,ಸೆ.12- ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಗೊಂದಲ ಗೌರಿ ಹಬ್ಬದ ದಿನದಂದೂ ಮುಂದುವರೆದಿದ್ದು ದೋಸ್ತಿ ಸರ್ಕಾರಕ್ಕೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ.
ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರು ಉರುಳಿಸುತ್ತಿರುವ ಹೊಸ ಹೊಸ ದಾಳಗಳು ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸಹೋದರರು ಒತ್ತಿ ಒತ್ತಿ ಹೇಳುತ್ತಿದ್ದರೂ ಅವರ ಮುಂದಿನ ರಾಜಕೀಯ ನಡವಳಿಕೆಗಳು ಸಮ್ಮಿಶ್ರ ಸರ್ಕಾರವನ್ನು ಅಕ್ಷರಶಃ ಹೈರಾಣಾಗಿಸಿದೆ.
ಇತ್ತ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಕೂಡ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ರೆಸಾರ್ಟ್ನತ್ತ ಕೊಂಡೊಯ್ಯಲು ಮುಂದಾಗಿದೆ. ಈ ಮೂಲಕ ಮತ್ತೆ ರಾಜ್ಯ ರಾಜಕಾರಣದಲ್ಲಿ ರೆಸಾರ್ಟ್ ರಾಜಕೀಯ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸಿವೆ.
ಈ ಬೆಳವಣಿಗೆಗಳ ನಡುವೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ತಮ್ಮ ನಿವಾಸದಲ್ಲಿ ಪಕ್ಷದ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ. ಇತ್ತ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಂಗಪ್ರವೇಶ ಮಾಡಿದ್ದು, ಜಾರಕಿಹೊಳಿ ಸಹೋದರರ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ.
ನಮ್ಮಿಂದ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ನಾವು ಕಾಂಗ್ರೆಸ್ ಬಿಡುವುದಿಲ್ಲ. ಸಮಸ್ಯೆ ಬಗೆಹರಿದಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆದರೆ ಅವರ ಸಹೋದರ ಸತೀಶ್ ಜಾರಕಿಹೊಳಿ ನಡೆ ಮಾತ್ರ ಈಗಲೂ ನಿಗೂಢವಾಗಿಯೇ ಉಳಿದಿದೆ.
ಕ್ಷಿಪ್ರ ಬೆಳವಣಿಗೆಗಳು:
ಗೌರಿ ಹಬ್ಬದ ದಿನವಾದ ಬುಧವಾರ ರಾಜಧಾನಿ ಬೆಂಗಳೂರು ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಬೆಳಗೆಯಿಂದಲೇ ಯಡಿಯೂರಪ್ಪ ಡಾಲರ್ಸ್ ಕಾಲೋನಿಯ ಮೈತ್ರಿ ನಿವಾಸದಲ್ಲಿ ತಮ್ಮ ಪಕ್ಷದ ಶಾಸಕರ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದರು.
ಇನ್ನೆರಡು ದಿನ ಸುಮ್ಮನಿರಿ. ಯಾರೊಬ್ಬರು ಆತುರದ ನಿರ್ಧಾರ ಕೈಗೊಳ್ಳಬಾರದೆಂದು ಸೂಚಿಸಿದರು. ಇನ್ನು ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ ಖರ್ಗೆ, ಸರ್ಕಾರ ಹಾಗೂ ಪಕ್ಷಕ್ಕೆ ಹಾನಿಯಾಗುವಂತಹ ಯಾವುದೇ ದುಡುಕಿನ ನಿರ್ಧಾರವನ್ನು ಕೈಗೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
ಖರ್ಗೆ ಅವರು ನಮಗೆ ತಂದೆಯ ಸಮಾನ. ಅವರು ಹೇಳಿದಂತೆ ನಡೆಯುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಿದ್ದರೂ ಅನುಮಾನದ ಹುತ್ತ ಜಾರಕಿಹೊಳಿ ಸಹೋದರರ ಮೇಲೆ ನೆಟ್ಟಿದೆ.
ಬುಧವಾರ ವದಂತಿಗಳದೇ ಕಾರುಬಾರಾಗಿತ್ತು. ಸಚಿವ ಸಾ.ರಾ.ಮಹೇಶ್,ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆಪರೇಷನ್ ಕಮಲಕ್ಕೆ ಪ್ರತಿಯಾಗಿ ನಾವು ಕೂಡ ಆಪರೇಷನ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಚಿವರ ಈ ಹೇಳಿಕೆಯಿಂದ ತುಸು ಅದೀರನಾಗಿರುವ ಬಿಜೆಪಿ ಗೌರಿ-ಗಣೇಶ ಹಬ್ಬ ಮುಗಿಯುತ್ತಿದ್ದಂತೆ ತನ್ನ ಎಲ್ಲಾ ಶಾಸಕರನ್ನು ರೆಸಾರ್ಟ್ಗೆ ಕೊಂಡೊಯ್ಯಲು ಮುಂದಾಗಿದೆ.
ದಿನೇಶ್ ಗುಂಡೂರಾವ್ ಸಂಧಾನ:
ಇನ್ನು ಪರಿಸ್ಥಿತಿ ಕೈ ಮೀರಿಹೋಗುವುದನ್ನು ಅರಿತಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.