ಬಿಜೆಪಿ ರಹಸ್ಯ ಸಭೆ: ಸಮ್ಮಿಶ್ರ ಸರ್ಕಾರದಲ್ಲಿ ತಳಮಳ

ಬೆಂಗಳೂರು,ಸೆ.12-ಕಾಂಗ್ರೆಸ್-ಜೆಡಿಎಸ್‍ನಲ್ಲಿ ಉಂಟಾಗಿರುವ ಗೊಂದಲದ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಆಪ್ತ ಶಾಸಕರ ಜೊತೆ ರಹಸ್ಯ ಮಾತುಕತೆ ನಡೆಸಿದರು.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಕೆಲವೇ ಕೆಲವು ಆಪ್ತ ಶಾಸಕರು ಹಾಗೂ ಪಕ್ಷದ ಮುಖಂಡರನ್ನು ಆಹ್ವಾನಿಸಿದ್ದ ಯಡಿಯೂರಪ್ಪ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.
ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಸಿದ್ದು ಸವದಿ, ಗೋವಿಂದ ಕಾರಜೋಳ, ಬೆಳ್ಳಿ ಪ್ರಕಾಶ್, ಸುರೇಶ್, ನಿರಂಜನ್ ಕುಮಾರ್ ಸೇರಿದಂತೆ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಸಹೋದರ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ಶಾಸಕರು ಕಾಂಗ್ರೆಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ ಹೊರಗೆ ಹೋಗುವ ಬೆದರಿಕೆ ಹಾಕಿದ್ದಾರೆ. ಇದನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ ದೋಸ್ತಿ ಸರ್ಕಾರದ ಕೆಲವು ಶಾಸಕರನ್ನು ಸೆಳೆಯಲು ಮುಂದಾಗಿದೆ.

ಒಂದು ವೇಳೆ ಅಸಮಾಧಾನಗೊಂಡಿರುವ ಶಾಸಕರು ಬಿಜೆಪಿಗೆ ಬಂದರೆ ಪಕ್ಷದಲ್ಲಿ ಅವರಿಗೆ ನೀಡಬಹುದಾದ ಸ್ಥಾನಮಾನಗಳು, ಸರ್ಕಾರ ರಚನೆ ಸೇರಿದಂತೆ ಮತ್ತಿತರ ಪ್ರಮುಖ ವಿಷಯಗಳ ಬಗ್ಗೆ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಕೆಲವರು ತ್ಯಾಗ ಮಾಡಲು ಸಿದ್ಧರಿರಬೇಕು. ಮಂತ್ರಿ ಸ್ಥಾನ ಇಲ್ಲವೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗದೇ ಇರುವ ಶಾಸಕರು ಯಾವುದೇ ಕಾರಣಕ್ಕೂ ಬಂಡಾಯ ಸಾರುವುದು ಇಲ್ಲವೇ ಪಕ್ಷ ಬಿಟ್ಟು ಹೋಗಬಾರದೆಂದು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೇರೆ ಪಕ್ಷದಿಂದ ಬಂದವರಿಗೆ ಸ್ಥಾನಮಾನ ನೀಡಿದರೆ ಯಾವುದೇ ಶಾಸಕರು ಅಸಮಾಧಾನಗೊಳ್ಳಬಾರದು. ಈ ಹಿಂದೆ ಕೆಲವು ಶಾಸಕರು ಭಿನ್ನಮತ ಸಾರಿ ಹೈದರಾಬಾದ್‍ಗೆ ಹೋಗಿದ್ದರಿಂದ ಪಕ್ಷದ ಮಾನ ಹರಾಜಾಗಿತ್ತು. ಪುನಃ ಅದಕ್ಕೆ ಅವಕಾಶ ನೀಡಬಾರದು. ಮುಂದೆ ಎಲ್ಲರಿಗೂ ಸೂಕ್ತವಾದ ಸ್ಥಾನಮಾನ ನೀಡಲಾಗುವುದು. ಎಲ್ಲರು ತಾಳ್ಮೆಯಿಂದ ಇರಬೇಕೆಂದು ಸಲಹೆ ಮಾಡಿದ್ದಾರೆ.

ನಮ್ಮ ನಿರೀಕ್ಷೆಗೆ ತಕ್ಕಂತೆ ಎಲ್ಲವೂ ನಡೆದರೆ ಸರ್ಕಾರ ರಚನೆ ಮಾಡಲು ಸಿದ್ದರಿದ್ದಾರೆ. ಮೊದಲು ಶಾಸಕರೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ನಮ್ಮಲ್ಲಿ ಒಂದೇ ಒಂದು ಸಣ್ಣ ವ್ಯತ್ಯಾಸವಾದರೂ ಪ್ರತಿಪಕ್ಷಗಳು ಇದನ್ನೇ ಬಂಡವಾಳ ಮಾಡಿಕೊಳ್ಳಲು ಯತ್ನಿಸುತ್ತವೆ. ಇದಕ್ಕೆ ಎಳ್ಳಷ್ಟು ಅವಕಾಶ ಕೊಡದಂತೆ ಎಚ್ಚರದಿಂದಿರುವಂತೆ ಸೂಚಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನಾವು ಮತ್ತೊಮ್ಮೆ ಹೆಚ್ಚಿನ ಸ್ಥಾನ ಪಡೆಯಲಿದ್ದು, ನರೇಂದ್ರ ಮೋದಿ ಅವರನ್ನು ಪುನಃ ಪ್ರಧಾನಿ ಮಾಡಬೇಕಿದೆ. ಇದಕ್ಕಾಗಿ ಕೆಲವರು ತ್ಯಾಗ ಮಾಡುವುದು ಅನಿವಾರ್ಯ. ಅವರವರ ಹಿರಿತನಕ್ಕೆ ತಕ್ಕಂತೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಯಾರೊಬ್ಬರೂ ಆತುರದ ನಿರ್ಧಾರ ಕೈಗೊಳ್ಳಬಾರದು. ಭವಿಷ್ಯದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿದೆ ಎಂಬ ಮಾತನ್ನು ಯಡಿಯೂರಪ್ಪ ಹೇಳಿದರು.
ಇಂದು ಡಾಲರ್ಸ್ ಕಾಲೋನಿಯಲ್ಲಿ ದಿನಪೂರ್ತಿ ಯಡಿಯೂರಪ್ಪ ನಿವಾಸದಲ್ಲಿ ಸರಣಿ ಸಭೆಗಳನ್ನು ನಡೆಸಲಾಯಿತು. ಆಪರೇಷನ್ ಕಮಲದ ಬದಲು ಸ್ವಯಂ ಪ್ರೇರಿತರಾಗಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಬರುವವರನ್ನು ಕರೆತರಲು ಬಿಎಸ್‍ವೈ ಕೆಲವೆ ಕೆಲವು ಆಪ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ