ಬೆಂಗಳೂರು: ರಾಜ್ಯದಲ್ಲಿ ಗೌರಿ ಹಬ್ಬದ ಸಂಭ್ರಮದ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲದ ಮಾತುಗಳು ಕೇಳಿ ಬರುತ್ತಿರುವ ನಡುವೆ ಬಿಎಸ್ವೈ ನಿವಾಸದಲ್ಲಿನ ಸಭೆ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬೆಳಗ್ಗೆಯಿಂದಲೇ ಪಕ್ಷದ ಮುಖಂಡರು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಆಪ್ತ ಶಾಸಕರು ಮತ್ತು ಪಕ್ಷದ ಪ್ರಮುಖರೊಂದಿಗೆ ಯಡಿಯೂರಪ್ಪ ಸಭೆ ನಡೆಸುತ್ತಿದ್ದಾರೆ.
ಈಗಾಗಲೇ ಆಪರೇಷನ್ ಕಮಲ ಮಾಡುವ ಯತ್ನಕ್ಕೆ ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಆರೋಪ ಮಾಡಿದ್ದು, ಈ ಆಪಾದನೆಯಿಂದ ಪಾರಾಗುವ ಕುರಿತು ಶಾಸಕರೊಂದಿಗೆ ಯಡಿಯೂರಪ್ಪ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬೆಳಗ್ಗೆಯಿಂದಲೇ ನಡೆಯುತ್ತಿರುವ ಸಭೆ ಸುದೀರ್ಘವಾಗುತ್ತಿದ್ದು, ಗಣಪತಿ ಹಬ್ಬದ ನಂತರ ಬಿಜೆಪಿ ಯಾವ ರೀತಿಯ ಹೆಜ್ಜೆ ಇಡಬೇಕು. ಸರ್ಕಾರ ರಚನೆ ಸಾಧ್ಯತೆ ಇದ್ದಲ್ಲಿ ಹೇಗೆ ನಿರ್ಧಾರ ಪ್ರಕಟಿಸಬೇಕು ಎನ್ನುವ ಕುರಿತು ಆಪ್ತರೊಂದಿಗೆ ಯಡಿಯೂರಪ್ಪ ಮಹತ್ವದ ಮಾತುಕತೆ ನಡೆಸುತ್ತಿದ್ದಾರಂತೆ.
ಈಗಾಗಲೆ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನುವ ಮಾತುಗಳು ಕೇಳಿಬಂದಿದ್ದು, ಅದಕ್ಕೆ ಪೂರಕವಾಗಿ ಯಡಿಯೂರಪ್ಪ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಕೂಡ ಯಡಿಯೂರಪ್ಪ ಪ್ರಯತ್ನಕ್ಕೆ ಸಹಕಾರ ನೀಡಿದ್ದು, ಬೆಳಗಾವಿಯ ಕಾಂಗ್ರೆಸ್ ಪ್ರಭಾವಿ ನಾಯಕರಾದ ಜಾರಕಿಹೊಳಿ ಸಹೋದರರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾತುಗಳ ನಡುವೆ ಇಂದು ಯಡಿಯೂರಪ್ಪ ನಡೆಸುತ್ತಿರುವ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಈ ಸಭೆಯಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಎಂ.ಪಿ.ರೇಣುಕಾಚಾರ್ಯ, ತರಿಕರೆ ಶಾಸಕ ಸುರೇಶ್, ಸಿದ್ದು ಸವದಿ, ವೀರಣ್ಣ ಚರಂತಿಮಠ, ಪ್ರೊ. ಲಿಂಗಣ್ಣ ಮಾಯಕೊಂಡ ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದು, ಕಾಂಗ್ರೆಸ್ ಬಂಡಾಯ ಶಾಸಕರನ್ನು ಸೆಳೆಯುವ ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎನ್ನುವ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿಬಂದಿವೆ.