ಮಹಾ ಸಿಎಂ ಹಾಗೂ ಸಚಿವ ಜಾರಕಿಹೊಳಿ ಭೇಟಿ ವಿಚಾರ: ಸಂಬಂಧಪಟ್ಟವರಲ್ಲಿ ಕೇಳಿ ಎಂದ ಯಡಿಯೂರಪ್ಪ

ಬೆಂಗಳೂರು, ಸೆ.11-ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿರುವ ಬಗ್ಗೆ ಸಂಬಂಧಪಟ್ಟವರಲ್ಲಿ ಕೇಳಿ ಎಂದು ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖಾರವಾಗಿ ಪ್ರತಿಕ್ರಿಯಿಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ದೇವೇಂದ್ರ ಫಡ್ನವೀಸ್, ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಿಮಗೆ ಅಗತ್ಯವಿದ್ದರೆ ಅವರನ್ನೇ ಕೇಳಿ ಎಂದು ಹೇಳಿದರು.
ನನಗೆ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿರುವ ಬಗ್ಗೆ ಮಾಹಿತಿ ಇಲ್ಲ. ನಿಮಗೆ ಅವರ (ರಮೇಶ್‍ಜಾರಕಿಹೊಳಿ) ಮನೆ ವಿಳಾಸ ಗೊತ್ತಲ್ಲವೇ? ಅಲ್ಲಿಗೇ ಹೋಗಿ ಕೇಳಿ ಎಂದು ತಿಳಿಸಿದರು.

ಇದಕ್ಕೂ ಮುನ್ನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‍ವೈ ನಿವಾಸದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಮತ್ತಿತರರೊಂದಿಗೆ ಮಾತುಕತೆ ನಡೆಸಿದರು.
ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಶಾಸಕರನ್ನು ಒಂದೇ ಹಂತದಲ್ಲೇ ಪಕ್ಷಕ್ಕೆ ಕರೆತರಬೇಕೇ, ಇಲ್ಲವೇ ಮೂರು ಹಂತಗಳಲ್ಲಿ ಕರೆತರಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ