ಬೆಂಗಳೂರು, ಸೆ.10- ತೈಲ ಬೆಲೆ ಏರಿಕೆಯಿಂದ ವಿವಿಧ ಸರಕುಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಜನಸಾಮಾನ್ಯರು ತೊಂದರೆಗೀಡಾಗುತ್ತಾರೆ. ಕೂಡಲೇ ಇದರ ಬಗ್ಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದ್ದಾರೆ.
ಜನಸಾಮಾನ್ಯರು ಕಷ್ಟಕ್ಕೆ ಸಿಲುಕಿದಾಗ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಆದರೆ ಇದೇ ವೇಳೆ ಬಂದ್ನಿಂದ ಪರಿಹಾರ ಸಿಗುತ್ತದೆ ಎಂಬುದು ಸರಿಯಲ್ಲ. ಯಾವುದೇ ಅದರಿಂದ ಸಿಗುವ ಲಾಭವು ಶೂನ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸರಕು ಸಾಗಣೆ ಉತ್ಪನ್ನಗಳ ತಯಾರಿಕೆ ಮತ್ತು ಸೇವಾ ಕ್ಷೇತ್ರದಲ್ಲಿ ಮತ್ತು ಕೈಗಾರಿಕೆಗಳಲ್ಲಿ ಬಂದ್ನಿಂದ ವ್ಯಾಪಕ ನಷ್ಟ ಉಂಟಾಗುತ್ತದೆ. ಎಫ್ಕೆಸಿಸಿಐ ಸದಸ್ಯ ಸಂಸ್ಥೆಗಳ ದಿನದ ವಾರ್ಷಿಕ ವಹಿವಾಟು ಸುಮಾರು 2 ಸಾವಿರ ಕೋಟಿ ಅಂದಾಜಿದೆ. ಸರ್ಕಾರಕ್ಕೂ ತೆರಿಗೆ ರೂಪದಲ್ಲಿ ಪ್ರತಿ ದಿನ ಸುಮಾರು 200 ಕೋಟಿ ರೂ. ವರೆಗೂ ಸಂದಾಯವಾಗುತ್ತದೆ. ಆದರೆ ಈ ಬಂದ್ನಿಂದಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಲು ಸಾಲು ರಜೆಗಳು ಈಗ ಬಂದ್ನಿಂದಾಗಿ ಕೈಗಾರಿಕಾ ವಲಯ ಭಾರೀ ಸಂಕಷ್ಟಕ್ಕೆ ಸಿಲುಕುತ್ತಿದೆ. ಇದರ ನಡುವೆ ಗೌರಿ-ಗಣೇಶ ಹಬ್ಬವೂ ಬಂದಿರುವುದರಿಂದ ಜನಸಾಮಾನ್ಯರು ತೊಂದರೆಗೀಡಾಗುತ್ತಾರೆ. ಬಂದ್ ನಡೆಸುವ ಸಮಯ ಕೂಡ ಸರಿ ಇಲ್ಲ ಎಂದು ಹೇಳಬಹುದು.