ಹೈದರಾಬಾದ್: ಭಾರತದಲ್ಲಿ ತೈಲ ಬೆಲೆ ಏರಿಕೆಗೆ ಜಾಗತಿಕ ಪರಿಸ್ಥಿತಿಯೇ ಪ್ರಮುಖ ಕಾರಣ ಎಂದು ವ್ಯಾಪಾರಿ ಒಕ್ಕೂಟ ಅಸ್ಸೊಚಾಮ್ ಸೋಮವಾರ ಹೇಳಿದೆ. ಆದರೆ ತೆರಿಗೆ ಕಡಿಮೆ ಮಾಡಿದರೆ ಜನರ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕು ಎಂಬುದು ನಮ್ಮ ನಿಲುವು. ಆದರೆ ಸದ್ಯ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಅನಿಸುತ್ತಿದೆ ಎಂದು ಅಸ್ಸೊಚಾಮ್ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ವರ್ಮಾ ಅವರು ಪಿಟಿಐಗೆ ತಿಳಿಸಿದ್ದಾರೆ.
ಭಾರತದಲ್ಲಿ ತೈಲ ಬೆಲೆ ಏರಿಕೆಗೆ ಜಾಗತಿಕ ಪರಿಸ್ಥಿತಿಯೇ ಪ್ರಮುಖ ಕಾರಣವಾಗಿದ್ದು, ಇದು ಇಡೀ ಉದಯೋನ್ಮುಖ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ಸೇರಿದಂತೆ ವಿಶ್ವದ ಬಹುತೇಕ ಕರೆನ್ಸಿಗಳು ದುರ್ಬಲಗೊಳ್ಳುತ್ತಿದ್ದು, ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಅಲ್ಲದೆ ಭಾರತ ಅತಿ ದೊಡ್ಡ ತೈಲ ಆಮದು ರಾಷ್ಟ್ರವಾಗಿದೆ ಎಂದು ವರ್ಮಾ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರ ಮೇಲಿನ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.