ಅಂತಿಮ ಘಟ್ಟ ತಲುಪಿದ ಜಾರಕಿಹೊಳಿ ಸಹೋದರರು ಮತ್ತು ಬಿಜೆಪಿ ಮಾತುಕತೆ

ಬೆಂಗಳೂರು, ಸೆ.10- ಬೆಳಗಾವಿ ಜಿಲ್ಲಾ ರಾಜಕಾರಣದ ಸಂಘರ್ಷ ವಿಪರೀತ ಹಂತಕ್ಕೆ ತಲುಪುತ್ತಿದ್ದು, ಜಾರಕಿಹೊಳಿ ಸಹೋದರರು ಮತ್ತು ಬಿಜೆಪಿ ನಡುವೆವಿನ ಮಾತುಕತೆ ಅಂತಿಮ ಘಟ್ಟ ತಲುಪಿದೆ.
ಉನ್ನತ ಮೂಲಗಳ ಪ್ರಕಾರ ಜಾರಕಿಹೊಳಿ ಸಹೋದರರು ತಮ್ಮ ಬಳಿ 23 ಶಾಸಕರ ಸಂಖ್ಯಾಬಲ ಇದೆ ಎಂದು ಹೇಳಿಕೊಂಡಿದ್ದು, ಬಿಜೆಪಿ ಜಾರಕಿಹೊಳಿ ಸಹೋದರರೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮತ್ತು ಅವರ ಬಣದ 10 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ 23 ಶಾಸಕರ ಪಟ್ಟಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದು, ಕಾಂಗ್ರೆಸ್‍ನ ಪ್ರಮುಖ ನಾಯಕರಾದ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಆದರೆ, ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹೀಗಾಗಿ ಇಂದು ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಗಳು ಕಡಿಮೆ ಇದೆ. ಆದರೆ, ಬಿಜೆಪಿ ನಾಯಕರು ಜಾರಕಿಹೊಳಿ ಸಹೋದರರ ಜತೆ ರಹಸ್ಯ ಸಭೆ ನಡೆಸಲು ವೇದಿಕೆ ಸಜ್ಜುಗೊಳಿಸಿದ್ದಾರೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗದೆ ನೇಪತ್ಯದಲ್ಲಿದ್ದು, ಬಿಜೆಪಿ ನಾಯಕರ ಜತೆ ಮಾತುಕತೆಗಳು ಮುಂದುವರೆದಿದೆ ಎನ್ನಲಾಗಿದೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿರುವ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕ ಲಕ್ಷ್ಮೀಹೆಬ್ಬಾಳ್ಕರ್ ತಮ್ಮ ಬಣವನ್ನೇ ಗೆಲ್ಲಿಸಿಕೊಡಬೇಕು ಎಂಬ ಹಠಕ್ಕೆ ಬಿದ್ದು ರೆಸಾರ್ಟ್ ರಾಜಕೀಯ ಮಾಡಿದ್ದರು. 18 ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಕಾರ್ಯಕಾರಿ ಮಂಡಳಿಗೆ ಈ ಬಾರಿ ಚುನಾವಣೆ ನಡೆಸಲು ಕೋರ್ಟ್‍ನಿಂದ ಲಕ್ಷ್ಮೀಹೆಬ್ಬಾಳ್ಕರ್ ಆದೇಶ ತಂದಿದ್ದರು. ಇದು ಜಾರಕಿಹೊಳಿ ಸಹೋದರರನ್ನು ರೊಚ್ಚಿಗೆಬ್ಬಿಸಿತ್ತು.

ಸಂಘರ್ಷ ಹುಚ್ಚರಾಯ ಸ್ಥಿತಿಗೆ ಹೋದಾಗ ಮಧ್ಯ ಪ್ರವೇಶ ಮಾಡಿದ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಮೂಲಕ ಸಂಧಾನ ನಡೆಸಿತ್ತು. ಅದರಂತೆ ಲಕ್ಷ್ಮೀಹೆಬ್ಬಾಳ್ಕರ್ ಆಪ್ತನನ್ನು ಅಧ್ಯಕ್ಷರನ್ನಾಗಿ ಮಾಡಬಾರದು ಎಂದು ಜಾರಿಕಿಹೊಳಿ ಸಹೋದರರು ಪಟ್ಟು ಹಿಡಿದರು.
ಕೊನೆಗೆ ಜಾರಕಿಹೊಳಿ ಸಹೋದರರು ಸೂಚಿಸಿದ, ಲಕ್ಷ್ಮೀಹೆಬ್ಬಾಳ್ಕರ್ ಬಣದ ವ್ಯಕ್ತಿಯೇ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾದರು. ಮೇಲ್ನೋಟಕ್ಕೆ ಜಾರಕಿಹೊಳಿ ಸಹೋದರರು ಲಕ್ಷ್ಮೀಹೆಬ್ಬಾಳ್ಕರ್ ಆಪ್ತನನ್ನು ಬ್ಯಾಂಕ್ ಅಧ್ಯಕ್ಷನಾಗದಂತೆ ತಡೆದರೂ ಹೆಬ್ಬಾಳ್ಕರ್ ಬಣ ಮೇಲುಗೈ ಸಾಧಿಸಿತ್ತು.
ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀಹೆಬ್ಬಾಳ್ಕರ್ ಅವರು ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಎಲ್ಲವೂ ಮಾತುಕತೆ ಮೂಲಕ ಬಗೆಹರಿದಿದೆ ಎಂದು ಔಪಚಾರಿಕ ಹೇಳಿಕೆ ನೀಡಿದ್ದರು. ಆದರೆ, ಪತ್ರಿಕಾಗೋಷ್ಠಿಯ ಹೊರಗಡೆ ರಮೇಶ್‍ಜಾರಕಿಹೊಳಿ ಬೆಂಬಲಿಗರು ಆಟ ಇನ್ನೂ ಮುಗಿದಿಲ್ಲ. ಮುಂದೆ ಹೊಸ ರೀತಿಯ ಬಾಂಬ್ ಸಿಡಿಯಲಿದೆ ಎಂಬ ರಾಜಕೀಯ ವಿಪ್ಲವದ ಮುನ್ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ನಾನಾ ರೀತಿಯ ವದಂತಿಗಳು ಹರಡಲಾರಂಭಿಸಿವೆ.

ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಮಹೇಶ್‍ಕಮಟಹಳ್ಳಿ, ಕಾಗಡವಾಡ ಕ್ಷೇತ್ರದ ಶ್ರೀಮಂತಪಾಟೀಲ್, ಖಾನಾಪುರ ಕ್ಷೇತ್ರದ ಅಂಜಲಿ ಲಿಂಬಾಳ್ಕರ್ ಸೇರಿದಂತೆ ಬಹಳಷ್ಟು ಶಾಸಕರು ಜಾರಕಿಹೊಳಿ ಸೋದರರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ರಮೇಶ್ ಜಾರಕಿ ಹೊಳಿ ಅವರ ಪಟ್ಟಿಯಲ್ಲಿ ಬೆಳಗಾವಿ, ರಾಯಚೂರು, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸುಮಾರು 23 ಮಂದಿ ಶಾಸಕರ ಹೆಸರಿವೆ ಎಂದು ಹೇಳಲಾಗಿದೆ.

ಬೆಳಗಾವಿಯ ರಾಜಕೀಯದಲ್ಲಿ ಗುಂಪುಗಾರಿಕೆ ಆರಂಭಗೊಂಡಾಗಲೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ನಡುವೆ ಜಾರಕಿಹೊಳಿ ಸಹೋದರರನ್ನು ನಿಯಂತ್ರಿಸುವ ಸಾಮಥ್ರ್ಯ ಇರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಅವರ ಜತೆ ಜಾರಿಕಿಹೊಳಿ ಸಹೋದರರು ಅಸಮಾಧಾನಗೊಂಡಿದ್ದು, ಅವರ ಮಾತಿಗೂ ಮನ್ನಣೆ ನೀಡುವ ಪರಿಸ್ಥಿತಿ ಇಲ್ಲ. ಹೀಗಾಗಿ ಜಾರಕಿಹೊಳಿ ಸಹೋದರರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಹೆಣಗಾಡುತ್ತಿದೆ.
ಇಂದು ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಬಂದ್‍ನಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ತೊಡಗಿಸಿಕೊಂಡಿದ್ದರೆ, ಜಾರಕಿಹೊಳಿ ಸಹೋದರರು ತಮ್ಮ ರಾಜಕೀಯ ದಾಳ ಉರುಳಿಸಿದ್ದಾರೆ. ಮುಂದೆ ಹೈಕಮಾಂಡ್ ರಾಜಕೀಯ ಬೇಗುದಿಯನ್ನು ಯಾವ ರೀತಿ ತಣ್ಣಗೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ