ಜಾರಕಿಹೊಳಿ ಸಹೋದರರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ

ಬೆಂಗಳೂರು,ಸೆ.10- ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಖಭಂಗಕ್ಕೊಳಗಾಗಿ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರನ್ನು ಮಹರಾಷ್ಟ್ರ ಹಾಗೂ ಗೋವಾ ಬಿಜೆಪಿ ಮುಖಂಡರು ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಮಹರಾಷ್ಟ್ರ ಹಾಗೂ ಗೋವಾದಲ್ಲಿರುವ ಕೆಲವು ಬಿಜೆಪಿ ಹಿರಿಯ ನಾಯಕರ ಜೊತೆ ಹಲವಾರು ವರ್ಷಗಳಿಂದ ಜಾರಕಿಹೊಳಿ ಸಹೋದರರು ಅನ್ಯೋನ್ಯವಾಗಿದ್ದಾರೆ. ಇದೀಗ ಈ ಸ್ನೇಹವನ್ನೇ ಬಳಸಿಕೊಂಡು ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆದಿದೆ.

ನಿನ್ನೆಯಿಂದ ಜಾರಕಿಹೊಳಿ ಸಹೋದರರನ್ನು ರಾಜ್ಯ ಕಾಂಗ್ರೆಸ್ ನಾಯಕರು ಸತತವಾಗಿ ಸಂಪರ್ಕಿಸುವ ಪ್ರಯತ್ನ ಮಾಡಿದರೂ ಯಾರೊಬ್ಬರೂ ಇವರ ಕೈಗೆ ಸಿಗುತ್ತಿಲ್ಲ. ಸಚಿವ ರಮೇಶ್ ಜಾರಕಿಹೊಳಿ ಅವರನ್ನು ನೆರೆಯ ರಾಜ್ಯದ ಬಿಜೆಪಿ ಪ್ರಮುಖರೊಬ್ಬರು ಪಕ್ಷಕ್ಕೆ ಕರೆತರುವ ಹೊಣೆ ಹೊತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ ಜೊತೆ ಬೆಳಗಾವಿ ಸೇರಿದಂತೆ 13 ಶಾಸಕರು ಸಂಪರ್ಕದಲ್ಲಿದ್ದು , ಎಲ್ಲರೂ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪಿಎಲ್‍ಡಿ ಬ್ಯಾಂಕ್ ಚುನಾವಣೆ ಮುಗಿದರೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಮತ್ತು ತಮ್ಮ ಸಹೋದರರ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವುದಕ್ಕೆ ರಮೇಶ್ ಜಾರಕಿಹೊಳಿ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ವರಿಷ್ಠರ ಮಧ್ಯಪ್ರವೇಶದಿಂದಾಗಿ ಎಲ್ಲವೂ ಸುಖಾಂತ್ಯ ಕಂಡಿದ್ದರೂ ಲಕ್ಷ್ಮಿ ಹೆಬ್ಬಾಳ್ಕರ್ ನಡೆಸುತ್ತಿರುವ ವಾಗ್ದಾಳಿ ಹಾಗೂ ತಮ್ಮ ಕುಟುಂಬವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಷಡ್ಯಂತ್ರ ನಡೆಸಲಾಗುತ್ತದೆ ಎಂಬ ಶಂಕೆ ಅವರನ್ನು ಕಾಡುತ್ತಿದೆ.

ಭರ್ಜರಿ ಆಫರ್:
ಮೂಲಗಳ ಪ್ರಕಾರ ಜಾರಕಿಹೊಳಿ ಸಹೋದರರು ಬಿಜೆಪಿಗೆ ಬಂದರೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡುವ ಭರವಸೆ ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು, ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಅವರ ಜೊತೆ ಬರುವ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಆಶ್ವಾಸನೆ ಸಿಕ್ಕಿರುವುದರಿಂದಲೇ 13 ಶಾಸಕರು ಕಾಂಗ್ರೆಸ್‍ಗೆ ಕೈ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪಕ್ಷ ಬಿಡುವ ತೀರ್ಮಾನಕ್ಕೆ ಕಾಂಗ್ರೆಸ್‍ನಲ್ಲಿರುವ ಹಾಗೂ ಪ್ರಭಾವಿ ನಾಯಕರೊಬ್ಬರ ಕೃಪಾರ್ಶೀವಾದ ಇರುವುದರಿಂದ ಜಾರಕಿಹೊಳಿ ಸಹೋದರರು ಲಕ್ಷ್ಮಣ ರೇಖೆ ದಾಟಿದ್ದಾರೆ ಎಂದು ಹೇಳಲಾಗುತ್ತಿದೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಎಫ್‍ಐಆರ್ ದಾಖಲಿಸಲು ಸಿದ್ಧತೆ ನಡೆಸಿರುವ ಸಂದರ್ಭದಲ್ಲಿ ಜಾರಕಿಹೊಳಿ ಸಹೋದರರ ಬಂಡಾಯ ಕಾಂಗ್ರೆಸ್‍ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ನಮ್ಮ ವಿಷಯದಲ್ಲಿ ತಲೆ ಹಾಕದಂತೆ ಶಿವಕುಮಾರ್ ಅವರಿಗೆ ಈಗಾಗಲೇ ಪರೋಕ್ಷವಾಗಿ ಎಚ್ಚರಿಕೆ ನೀಡಿರುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ