ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಭಾರತ್ ಬಂದ್‍ಗೆ ಸಾರ್ವಜನಿಕರು ಬೆಂಬಲಿಸಿ: ವಾಟಾಳ್ ನಾಗರಾಜ್ ಕರೆ

ಬೆಂಗಳೂರು, ಸೆ.9- ಬೆಲೆ ಏರಿಕೆಯಿಂದ ಬಡ-ಮಧ್ಯಮ ವರ್ಗದ ಜನ ಹೈರಾಣಾಗಿದ್ದಾರೆ. ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಕರೆ ನೀಡಿರುವ ಭಾರತ್ ಬಂದ್‍ಗೆ ಸಾರ್ವಜನಿಕರು ಬೆಂಬಲ ನೀಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದರು.
ನಾಳೆ ಕರೆ ಕೊಟ್ಟಿರುವ ಭಾರತ್ ಬಂದ್ ಯಶಸ್ವಿ ಬಗ್ಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೈಗೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ನಿರಂತರ ಏರಿಕೆಯಿಂದ ಸಾರ್ವಜನಿಕರು ಬೇಸತ್ತಿದ್ದಾರೆ.
ಹೊಟೇಲ್ ತಿಂಡಿ, ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಯಾವುದೇ ಸರ್ಕಾರಗಳು ಬೆಲೆ ಇಳಿಸಿ ಬಡವರಿಗೆ ಅನುಕೂಲವಾಗುವ ಕೆಲಸ ಮಾಡುತ್ತಿಲ್ಲ. ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಬಂದ್ ಕರೆ ಕೊಡಲು ಕನ್ನಡ ಒಕ್ಕೂಟ ಮುಂದಾಗಲು ನಿರ್ಧರಿಸಿತ್ತು. ಅದಕ್ಕೂ ಮುನ್ನ ಕಾಂಗ್ರೆಸ್ ಭಾರತ್ ಬಂದ್‍ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಅದಕ್ಕೇ ನಾವು ಬೆಂಬಲ ನೀಡುತ್ತಿದ್ದೇವೆ. ಒಟ್ಟಾರೆ ಜನರಿಗೆ ಅನುಕೂಲವಾಗಬೇಕೆಂಬುದು ನಮ್ಮ ಹೋರಾಟದ ಉದ್ದೇಶವಾಗಿದೆ.
ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಬಸ್ ದರ ಏರಿಕೆ ಮಾಡಲು ಮುಂದಾಗಿದೆ. ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಬಾರದು ಎಂದು ವಾಟಾಳ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ