ಭಾರತ್ ಬಂದ್ ಹಿನ್ನೆಲೆ: ಕರ್ನಾಟಕ ಸಂಪೂರ್ಣ ಸ್ತಬ್ಧ ಸಾಧ್ಯತೆ

ಬೆಂಗಳೂರು, ಸೆ.9- ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ನಿರಂತರ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಳೆ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆ ಇದೆ.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ರಸ್ತೆಗಿಳಿಯುವುದಿಲ್ಲ. ಖಾಸಗಿ ಬಸ್‍ಗಳ ಓಡಾಟ ಕೂಡ ಇರುವುದಿಲ್ಲ. ಚಲನಚಿತ್ರಮಂದಿರಗಳು, ಮಾಲ್‍ಗಳು ಓಪನ್ ಆಗುವುದಿಲ್ಲ. ಆಟೋ, ಟ್ಯಾಕ್ಸಿ, ಟೆಂಪೆÇೀಗಳು ಸಂಚರಿಸದಿರಲು ನಿರ್ಧರಿಸಿವೆ. ಬೆಲೆ ಏರಿಕೆ ವಿರೋಧಿಸಿ ನೂರಾರು ಕನ್ನಡಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳು ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿವೆ.

ಬಸ್, ಆಟೋ ಸಂಚಾರ ಸ್ಥಗಿತಗೊಳ್ಳುವುದರಿಂದ ಜನಜೀವನ ಅಸ್ತವ್ಯಸ್ತವಾಗಲಿದೆ. ವಾರಾಂತ್ಯಕ್ಕೆ ತಮ್ಮ ಊರುಗಳಿಗೆ ತೆರಳುವವರು ತೊಂದರೆಗೊಳಗಾಗುವ ಸಾಧ್ಯತೆ ಇದೆ.
ಭಾರತ್ ಬಂದ್‍ಗೆ ಪರ-ವಿರೋಧದ ನಿಲುವು ಕೂಡ ಹಲವೆಡೆ ವ್ಯಕ್ತವಾಗಿದೆ. ಬಿಜೆಪಿ ಹೊರತುಪಡಿಸಿ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಎಸ್‍ಪಿ, ಎಡಪಕ್ಷಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ನೇತೃತ್ವದಲ್ಲಿ ಕನ್ನಡ ಒಕ್ಕೂಟ, ಕನ್ನಡ ಸೇನೆ, ಜಯಕರ್ನಾಟಕ ಸಂಘಟನೆ, ಕ್ಯಾಬ್ ಆಧಾರಿತ ಟ್ಯಾಕ್ಸಿ, ಆಟೋ ಸಂಘಟನೆಗಳು ಕೂಡ ಬಂದ್‍ಗೆ ಕೈ ಜೋಡಿಸಿವೆ.
ಈ ನಡುವೆ ಕೆಲ ಸಂಘಟನೆಗಳು ರಾಜಕೀಯ ಪ್ರೇರಿತ ಎಂದು ಬೆಂಬಲ ನೀಡದಿರಲು ನಿರ್ಧರಿಸಿವೆ. ಕೆಲ ಹೊಟೇಲ್ ಸಂಘಟನೆಗಳು ಬಂದ್‍ಗೆ ಬೆಂಬಲಿಸದೆ ತಟಸ್ಥವಾಗಿರಲು ತೀರ್ಮಾನಿಸಿದ್ದು, ಹೊಟೇಲ್ ಮಾಲೀಕರು ಬಂದ್‍ಗೆ ಬೆಂಬಲಿಸದಿದ್ದರೆ ಹೊಟೇಲ್‍ಗೆ ಬಂದು ಊಟ ಮಾಡಿ ಬಿಲ್ ಕೊಡದಿರಲು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಲಾರಿ ಮಾಲೀಕರು ಮತ್ತು ಚಾಲಕರ ಸಂಘಗಳ ಒಕ್ಕೂಟ ಬಂದ್‍ನಿಂದ ತಟಸ್ಥವಾಗಿರಲು ನಿರ್ಧರಿಸಿದೆ. ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ. ಆದರೆ, ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಔಷಧಿ ಅಂಗಡಿ, ಆಸ್ಪತ್ರೆ, ಹಣ್ಣು-ತರಕಾರಿ, ಹಾಲು, ತರಕಾರಿ, ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸೇವೆಗಳ ಮೇಲೆ ಬಂದ್‍ನ ಪರಿಣಾಮ ಬೀರುವ ಸಾಧ್ಯತೆ ಇದೆ.
ಊಬರ್, ಟ್ಯಾಕ್ಸಿ ಫಾರ್ ಶೂ ಮಾಲೀಕರ ಸಂಘ, ಆದರ್ಶ ಆಟೋ-ಟ್ಯಾಕ್ಸಿ ಚಾಲಕರ ಹಾಗೂ ಮಾಲೀಕರ ಸಂಘ, ರಾಷ್ಟ್ರೀಯ ಚಾಲಕರ ಸಂಘ ಸೇರಿದಂತೆ ನೂರಾರು ಕನ್ನಡಪರ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಂದ್‍ನ ಪರ-ವಿರೋಧದ ಘೋಷಣೆಗಳು ವ್ಯಕ್ತವಾಗಿವೆ. ಖಾಸಗಿ ಶಾಲೆಗಳ ಒಕ್ಕೂಟ ಶಾಲೆಗಳಿಗೆ ರಜೆ ಘೋಷಿಸಲು ಮುಂದಾಗಿದೆ. ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸುವ ಸಂಬಂಧ ಆಯಾ ಜಿಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ.
ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಗಗನಕ್ಕೇರುತ್ತಿರುವುದು ಸಹಜವಾಗಿ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ ನಾಳಿನ ಬಂದ್‍ನಲ್ಲಿ ಎಲ್ಲ ಸಾರ್ವಜನಿಕರು ಭಾಗವಹಿಸಿ ತಮ್ಮ ಆಕ್ರೋಶ ಹೊರಹಾಕುವ ಸಾಧ್ಯತೆ ಇದೆ.

ಮುನ್ನೆಚ್ಚರಿಕೆ ಕ್ರಮವಾಗಿ ಪೆÇಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಪಿಎಂಸಿ ಮಾರುಕಟ್ಟೆ, ಕೆಆರ್ ಮಾರುಕಟ್ಟೆ, ಶಿವಾಜಿನಗರ, ಚಿಕ್ಕಪೇಟೆ ಸೇರಿದಂತೆ ಎಲ್ಲ ಮಾರುಕಟ್ಟೆ ವರ್ತಕರು ಕೂಡ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಜಿಲ್ಲಾದ್ಯಂತ ಬಂದ್ ಯಶಸ್ವಿಗಾಗಿ ಪೂರ್ವಭಾವಿ ಸಭೆಗಳನ್ನು ನಡೆಸಿದೆ. ಮೈತ್ರಿಪಕ್ಷ ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷ, ಸಂಘಟನೆಗಳು, ಸಾರ್ವಜನಿಕರು ಬಂದ್‍ಗೆ ಕೈ ಜೋಡಿಸಿರುವುದರಿಂದ ನಾಳಿನ ಬಂದ್ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ಹೊಂದಿದೆ.

ಈಗಾಗಲೇ ಜಾಗೃತಿಗಾಗಿ ಹಲವು ಕಾರ್ಯಕ್ರಮಗಳನ್ನು ಕೂಡ ನಡೆಸಿದೆ. ಮಾಜಿ ಪ್ರಧಾನಿ ದೇವೇಗೌಡರು ಬಂದ್‍ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಬಿಎಸ್‍ಪಿ ಪಕ್ಷ ಬಂದ್‍ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿರುವುದಲ್ಲದೆ ವಿಶೇಷವಾಗಿ ಹೋರಾಟ ಮಾಡುವುದಾಗಿ ತಿಳಿಸಿದೆ.
ಎಡಪಕ್ಷಗಳು ಕೂಡ ಬಂದ್‍ಗೆ ಸಂಪೂರ್ಣ ಬೆಂಬಲ ನೀಡಿವೆ. ಕಾರ್ಮಿಕ ಸಂಘಟನೆಗಳು, ಐಟಿ-ಬಿಟಿ ಕಂಪೆನಿಗಳು ಕೂಡ ನಾಳಿನ ಬಂದ್‍ನಲ್ಲಿ ಪಾಲ್ಗೊಳ್ಳುತ್ತಿವೆ. ಹೀಗಾಗಿ ರಾಜ್ಯ ನಾಳೆ ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ