ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಅಮಿತ್ ಷಾ ಕರೆ

ನವದೆಹಲಿ: ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಪಡೆದ ಸ್ಥಾನಗಳಿಗಿಂತಲೂ ಮುಂಬರುವ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೆ ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಸಜ್ಜಾಗಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕರೆ ಕೊಟ್ಟಿದ್ದಾರೆ.

ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಣಿ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಅಜೇಯ(ಅಜಯ್-ಬಿಜೆಪಿ) ಎಂಬ ಘೋಷ್ಯ ವಾಕ್ಯದೊಂದಿಗೆ ಚುನಾವಣೆಗೆ ಕಾರ್ಯಕರ್ತರು ಧುಮುಕಬೇಕೆಂದು ಸೂಚಿಸಿದರು.

ಲೋಕಸಭೆ ಚುನಾವಣೆಗೂ ಮುನ್ನ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಎದುರಾಗಲಿದೆ. ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡ ಹಾಗೂ ಮಿಜೋರಾಂನಲ್ಲಿ ನಡೆಯಲಿರುವ ಚುನಾವಣೆ ಪಕ್ಷಕ್ಕೆ ಅತ್ಯಂತ ಮಹತ್ವದ್ದು. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು.ಇದರಿಂದ ಲೋಕಸಭೆ ಚುನಾವಣೆಗೆ ಆನೆಬಲ ಬರುತ್ತದೆ ಎಂದು ಅಮಿತ್ ಷಾ ಹೇಳಿದ್ದಾರೆ.

2014ರ ಲೋಕಸಭೆ ಚುನಾವಣೆಯನ್ನು ಯಾರು ಏನೇ ಹೇಳಿದರೂ ನಾವೇ ಗೆಲ್ಲಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮಾಡಿರುವ ಅಭೂತಪೂರ್ವ ಕಾರ್ಯಗಳು, ದೇಶದ ಮತದಾರರ ನಮ್ಮ ದೇಶದ ಬಗ್ಗೆ ಇಟ್ಟುಕೊಂಡಿರುವ ನಿರೀಕ್ಷೆ ಸಹಕಾರಿಯಾಗಲಿವೆ. ಆದರೂ ನಾವು ಮೈಮರೆಯಬಾರದು ಎಂದು ಸಲಹೆ ಮಾಡಿದ್ದಾರೆ.

ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕಾರಣಿ ಸಭೆಯಲ್ಲಿ ಇತ್ತೀಚಿನ ಬೆಳವಣಿಗೆಗಳು, ಮುಂಬರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಕೈಗೊಳ್ಳಬೇಕಾದ ಕಾರ್ಯತಂತ್ರ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು, ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ದ ಕೆಲವು ಕಡೆ ಪ್ರತಿಭಟನೆಗಳು ವ್ಯಕ್ತವಾಗಿವೆ.

ಇದನ್ನು ಹೇಗೆ ಸರಿದೂಗಿಸಬೇಕೆಂಬುದರ ಬಗ್ಗೆಯೂ ಕಾರ್ಯಕಾರಿಣಿಯಲ್ಲಿ ಚರ್ಚೆಯಾಗಲಿದೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಸಾಮಾನ್ಯ ಜನತೆ ಸರ್ಕಾರದ ವಿರುದ್ದ ಆಕ್ರೋಶಗೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‍ಗೆ ಕಡಿಮೆಯಾಗುತ್ತಿದ್ದರೂ ತೈಲ ಬೆಲೆ ಒಂದೇ ಸಮನೆ ಗಗನಮುಖಿಯಾಗುತ್ತಿರುವುದರಿಂದ ಜನರ ಆಕ್ರೋಶವನ್ನು ತಣಿಸಲು ಮಾರ್ಗೋಪಾಯ ಕಂಡುಕೊಳ್ಳುವ ಸಾಧ್ಯತೆ ಇದೆ.

ಕಾರ್ಯಕಾರಿಣಿಯಲ್ಲಿ ಮುಖ್ಯವಾಗಿ ಹಲವು ಏರಿಳಿತಗಳ ನಡುವೆಯೂ ದೇಶದ ಆರ್ಥಿಕ ಸುಭದ್ರತೆ, ಸಾಮಾಜಿಕ ನ್ಯಾಯ, ಕೇಂದ್ರ ಸರ್ಕಾರ ಮಾಡಿರುವ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವುದು ಸೇರಿದಂತೆ ಪ್ರತಿ ಪಕ್ಷಗಳು ಮಾಡುತ್ತಿರುವ ಆರೋಪಗಳಗೆ ಪ್ರತ್ಯುತ್ತರ ನೀಡಬೇಕೆಂದು ಕರೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ