ಮೇಯರ್ ಮೀಸಲಾತಿ ಬದಲಾವಣೆ ಊಹಾಫೂಹಗಳಿಗೆ ತೆರೆ

ಬೆಂಗಳೂರು,ಸೆ.7- ಬಿಬಿಎಂಪಿ ಮೇಯರ್ ಮೀಸಲಾತಿ ಬದಲಾವಣೆ ಆಗಲಿದೆ ಎಂಬ ಊಹಾಪೆÇೀಹಗಳಿಗೆ ತೆರೆ ಬಿದ್ದಿದ್ದು, ನಿರೀಕ್ಷೆಯಂತೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಸೆ.28ರಂದು ನಡೆಯಲಿರುವ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯೊಬ್ಬರು ಮಹಾಪೌರರಾಗಿ ಆಯ್ಕೆಯಾಗಲಿದ್ದಾರೆ.
ಜಯನಗರ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಗಂಗಾಂಬಿಕೆ ಅಥವಾ ಶಾಂತಿನಗರ ವಾರ್ಡ್‍ನ ಸೌಮ್ಯ ಶಿವಕುಮಾರ್ ಆಡಳಿತರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಘೋಷಣೆಯಾಗುವ ಸಾಧ್ಯತೆಗಳಿವೆ.

ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಅಗತ್ಯ ಸಂಖ್ಯಾಬಲ ಹೊಂದಿಲ್ಲದಿದ್ದರೂ ಬಿಜೆಪಿ ಈ ಬಾರಿಯೂ ತಮ್ಮ ಪಕ್ಷದ ಮಹಿಳೆಯೊಬ್ಬರನ್ನು ಚುನಾವಣಾ ಕಣಕ್ಕಿಳಿಸಲು ತೀರ್ಮಾನಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯವನ್ನೇ ಅಸ್ತ್ರವನ್ನಾಗಿಸಿಕೊಂಡು ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸುತ್ತಿದೆ.
ಮೂರು ಬಾರಿ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿರುವುದರಿಂದ ಈ ಬಾರಿ ಮೇಯರ್ ಸ್ಥಾನವನ್ನು ನಮ್ಮ ಪಕ್ಷಕ್ಕೆ ನೀಡಿ ಎನ್ನುವುದು ಜೆಡಿಎಸ್ ಬೇಡಿಕೆಯಾಗಿದೆ.

ಮೇಯರ್ ಸ್ಥಾನ ಬಿಟ್ಟುಕೊಡಲೇ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದು ಇದಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿದರೆ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಇಲ್ಲವೇ ಜೆಡಿಎಸ್ ಗುಂಪಿನ ನಾಯಕಿ ನೇತ್ರ ನಾರಾಯಣ್ ಇಬ್ಬರಲ್ಲಿ ಒಬ್ಬರು ಮೇಯರ್ ಅಭ್ಯರ್ಥಿ ಆಗಲಿದ್ದಾರೆ.
ಉಪಮೇಯರ್‍ಗೆ ಫೈಟ್:
ಜೆಡಿಎಸ್ ಬೇಡಿಕೆಗೆ ಮನ್ನಣೆ ನೀಡದೆ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಮೇಯರ್ ಆಗಿಸಲು ಕಾಂಗ್ರೆಸ್ ನಿರ್ಧರಿಸಿದರೆ ಉಪಮೇಯರ್ ಸ್ಥಾನ ಜೆಡಿಎಸ್‍ಗೆ ಲಭಿಸಲಿದೆ.

ಹೀಗಾಗಿ ಜೆಡಿಎಸ್ ಸದಸ್ಯರಲ್ಲಿ ಉಪಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಬಿಗ್ ಫೈಟ್ ಆರಂಭವಾಗಿದೆ.
ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿಸಮಿತಿ ಅಧ್ಯಕ್ಷ ಇಮ್ರಾನ್ ಪಾಷ, ಅದೇ ಸಮಿತಿಯ ಮಾಜಿ ಅಧ್ಯಕ್ಷ ಭದ್ರೇಗೌಡ, ಹಿರಿಯ ಸದಸ್ಯ ದೇವದಾಸ್ ಹಾಗೂ ಕಳೆದ ಮೂರು ವರ್ಷಗಳಿಂದ ಯಾವುದೇ ಸಮಿತಿ ಅಧ್ಯಕ್ಷ ಗಿರಿ ದೊರೆಯದ ರಾಜಶೇಖರ್ ಅವರುಗಳು ಉಪಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಈ ನಾಲ್ವರು ನಾಯಕರು ತಮ್ಮ ಗಾಡ್ ಫಾದರ್‍ಗಳ ನೆರವಿನ ಮೂಲಕ ಉಪಮೇಯರ್ ಗದ್ದುಗೆ ಅಲಂಕರಿಸಲು ತೆರೆಮರೆ ಕಸರತ್ತು ಆರಂಭಿಸಿದ್ದು, ಯಾರಿಗೆ ನಗರದ ದ್ವಿತೀಯ ಪ್ರಜೆ ಸ್ಥಾನ ಸಿಗುವುದೋ ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ