ಬೆಂಗಳೂರು,ಸೆ.7-ನಾಗರಿಕರೇ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗುತ್ತಿದೆ. ಮನೆಮನೆಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಆದರೆ ಪರಿಸರ ಕಾಪಾಡಬೇಕಾದ ಹೊಣೆ ನಮ್ಮೆಲ್ಲರ ಮೇಲೆ ಇರುವುದರಿಂದ ಯಾವುದೇ ಕಾರಣಕ್ಕೂ ಹಾನಿಕಾರಕ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದನ್ನು ಕೈಬಿಡಿ.
ಪ್ಲಾಸ್ಟರಾಫ್ಪ್ಯಾರೀಸ್ ರಾಸಾಯನಿಕ ಬಣ್ಣಗಳನ್ನು ಬಳಸಿ ತಯಾರಿಸಲಾಗುವ ಗಣೇಶ ಮೂರ್ತಿಗಳನ್ನು ಖರೀದಿಸಬೇಡಿ. ಇದರ ಬದಲು ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ. ನಿಮಗೆ ಮಣ್ಣಿನ ವಿಗ್ರಹಗಳು ಸಿಗಲಿಲ್ಲವೆಂದರೆ ನಾಳೆ ಕಬ್ಬನ್ ಪಾರ್ಕ್ಗೆ ಆಗಮಿಸಿ ಉಚಿತವಾಗಿ ಮಣ್ಣಿನ ಗಣೇಶ ವಿಗ್ರಹಗಳನ್ನು ಪಡೆದುಕೊಳ್ಳಬಹುದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ನಾಳೆ ಕಬ್ಬನ್ ಪಾರ್ಕ್ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೂರಾರು ಪರಿಸರ ಗಣೇಶ ವಿಗ್ರಹಗಳನ್ನು ವಿತರಿಸಲಿದ್ದಾರೆ.
ಹಡ್ಸನ್ ವೃತ್ತದ ಸಮೀಪವಿರುವ ಕಬ್ಬನ್ ಪಾರ್ಕ್ ಮುಖ್ಯ ದ್ವಾರದಲ್ಲಿ ನಾಳೆ ಬೆಳಗ್ಗೆ 7.30ರಿಂದ ಪರಿಸರ ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ಮೇಯರ್ ಸಂಪತ್ರಾಜ್ ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಅಮೃತ್ರಾಜ್ ತಿಳಿಸಿದ್ದಾರೆ.
ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಪರಿಸರ ಗಣಪತಿ ಪ್ರತಿಷ್ಠಾಪಿಸುವ ಕುರಿತಂತೆ ಜಾಗೃತಿ ರಸ್ತೆ ಓಟ ಮತ್ತು ಬೀದಿ ನಾಟಕವನ್ನು ಹಮ್ಮಿಕೊಂಡಿದ್ದಾರೆ.