ಕಾಬುಲ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಭೀಕರ ಅವಳಿ ಬಾಂಬ್ ದಾಳಿ, ಪತ್ರಕರ್ತರೂ ಸೇರಿದಂತೆ 22 ಮಂದಿ ಸಾವು

ಕಾಬುಲ್​: ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ ಸ್ಪೋರ್ಟ್ಸ್‌ ಕ್ಲಬ್ ನಲ್ಲಿ ಭೀಕರ ಸಂಭವಿಸಿರುವ ಅವಳಿ ಬಾಂಬ್ ಸ್ಫೋಟದಿಂದಾಗಿ ಕನಿಷ್ಠ 22 ಮಂದಿ ಸಾವನ್ನಪ್ಪಿ, 80ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

ಕಾಬುಲ್ ನ ದಾತ್-ಇ-ಬರ್ಚಿ ಪ್ರದೇಶದಲ್ಲಿರುವ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲೂ ಉಗ್ರರು ತಮ್ಮ ಮಾನಸಿಕ ಅಸ್ವಸ್ಥತೆಯನ್ನು ಪ್ರದರ್ಶಿಸಿದ್ದಾರೆ. ಮೊದಲು ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಈ ವೇಳೆ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿದ್ದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲೇ ಕಾರಿನಲ್ಲಿ ಇಡಲಾಗಿದ್ದ ಮತ್ತೊಂದು ಬಾಂಬ್ ಅನ್ನು ಸ್ಫೋಟಿಸಲಾಗಿದೆ.

ಹೀಗಾಗಿ ಬಾಂಬ್ ಸ್ಫೋಟದ ತೀವ್ರ ಹೆಚ್ಚಾಗಿದ್ದು, ಘಟನೆಯಲ್ಲಿ ಅಪಾರ ಸಾವು-ನೋವುಗಳಾಗಿವೆ. ಈ ವರೆಗೂ ಯಾವುದೇ ಉಗ್ರ ಸಂಘಟನೆಗಳೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಈ  ಬಗ್ಗೆ ಮಾಹಿತಿ ನೀಡಿರುವ ಆಫ್ಘಾನಿಸ್ತಾನ ಆಂತರಿಕ ಇಲಾಖೆಯ ವಕ್ತಾರ ನಜೀಬ್‌ ಡ್ಯಾನಿಷ್‌ ಅವರು, ‘ಮೊದಲ ಬಾರಿಗೆ ಆತ್ಮಾಹುತಿ ಬಾಂಬರ್ ನಿಂದ ಸ್ಫೋಟ ಸಂಭವಿಸಿದ್ದು, ಸ್ವಲ್ಪ ಸಮಯದ ನಂತರ ಕಾರ್‌ ಬಾಂಬ್‌ ಸ್ಫೋಟಗೊಂಡಿದೆ ಎಂದು ಹೇಳಿದ್ದಾರೆ. ಅಂತೆಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆಯಲ್ಲಿ ಮಾಧ್ಯಮ ಸಂಸ್ಥೆಯೊಂದರ ಕ್ಯಾಮರಾಮನ್‌ ಮತ್ತು ರಿಪೋರ್ಟರ್‌ ಮೃತಪಟ್ಟಿದ್ದು, ಸ್ಥಳೀಯ ಮಾಧ್ಯಮವೊಂದರ ನಾಲ್ಕು ಜನ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಘಟನೆ ಕುರಿತಂತೆ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟವರಿಗೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ ಸಂತಾಪ ಸೂಚಿಸಿದ್ದು, ನಾಗರಿಕರು, ಮಾಧ್ಯಮ ಮಂದಿಯನ್ನು ದೇಶದಲ್ಲಿ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವೀಯತೆಯ ಮೇಲೆ ನಡೆಯುತ್ತಿರುವ ಆಕ್ರಮಣವಾಗಿದೆ ಎಂದು ತಿಳಿಸಿದ್ದಾರೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ