ಬೆಂಗಳೂರು, ಸೆ.6- ರಾಜ್ಯ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ಚಿಂತಾಮಣಿ ಕ್ಷೇತ್ರದ ಶಾಸಕರಾಗಿರುವ ಕೃಷ್ಣಾರೆಡ್ಡಿ ಅವರು ಉಪಸಭಾಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಉಪಸಭಾಧ್ಯಕ್ಷರಾಗಿದ್ದರೂ ಕ್ಷೇತ್ರದ ಕೆಲಸ, ಕಾರ್ಯಗಳನ್ನು ತೃಪ್ತಿಕರ ರೀತಿಯಲ್ಲಿ ಮಾಡಲಾಗುತ್ತಿಲ್ಲ ಎಂಬ ಅಸಮಾಧಾನವಿದೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೃಷ್ಣಾರೆಡ್ಡಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಸ್ಥಾನ ವಂಚಿತವಾದ ಮೇಲೆ ಜೆಡಿಎಸ್ ಪಕ್ಷದ ವರಿಷ್ಠರು ಮನವೊಲಿಸಿದ್ದರು.
ಆನಂತರ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಣೆಯನ್ನೂ ಕೂಡ ಮಾಡಿದ್ದರು. ಆದರೂ, ರಾಜೀನಾಮೆ ನೀಡಲು ಮುಂದಾಗುತ್ತಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಉಪಸಭಾಧ್ಯಕ್ಷ ಸ್ಥಾನಕ್ಕೆ ಮುಂದಿನ ವಾರ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಉಪಸಭಾಧ್ಯಕ್ಷ ಸ್ಥಾನ ಬಿಟ್ಟು ಮತ್ತೆ ಸಚಿವರಾಗುತ್ತಾರಾ ಅಥವಾ ಜೆಡಿಎಸ್ ಪಕ್ಷದ ವರಿಷ್ಠರ ಸಲಹೆಯಂತೆ ಮತ್ತೆ ಅದೇ ಸ್ಥಾನದಲ್ಲಿ ಮುಂದುವರೆಯುತ್ತಾರೋ, ಇಲ್ಲವೆ ರಾಜೀನಾಮೆ ನೀಡಿ ಶಾಸಕರಾಗಿಯೇ ಉಳಿಯುತ್ತಾರೋ ಕಾದು ನೋಡಬೇಕಿದೆ.