ಪ್ರಧಾನಿ ಮೋದಿ ದುರಾಡಳಿತದಿಂದ ಜನರು ಸಂಕಷ್ಟಕ್ಕೆ: ಪ್ರತಿಭಟನೆ

ಬೆಂಗಳೂರು, ಸೆ.6- ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ದರವನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ದೇಶದ ನಾಗರೀಕರ ಬದುಕನ್ನು ದುಸ್ತರವಾಗಿಸಿದೆ. ಪ್ರಧಾನಿ ಮೋದಿ ಅವರ ದುರಾಡಳಿತದಿಂದ ಜನ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಕೆಪಿಸಿಸಿ ನಗರ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು ಕೇಂದ್ರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ಧನ್ ಅವರ ನೇತೃತ್ವದಲ್ಲಿ ಆನಂದರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಲಾಯಿತು.

ಅಚ್ಚೇದಿನ್ ಹೆಸರಿನಲ್ಲಿ ಮೋದಿ ಸರ್ಕಾರ ಜನಸಾಮಾನ್ಯರನ್ನು ವಂಚಿಸುತ್ತಿದೆ. ಸುಳ್ಳು ಭರವಸೆಗಳನ್ನು ನೀಡಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸಂಕಷ್ಟಕ್ಕೀಡು ಮಾಡಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ದರ ಗಗನಕ್ಕೇರಿದೆ. ರೂಪಾಯಿ ಮೌಲ್ಯ ಪಾತಳಕ್ಕೆ ಕುಸಿದಿದೆ. ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳು ಇದಕ್ಕೆ ಕಾರಣ ಎಂದು ಜನಾರ್ಧನ್ ಆರೋಪಿಸಿದರು.
ಡೀಸೆಲ್ ದರ ಏರಿಕೆಯಿಂದ ಸಾರಿಗೆ ದರ, ದಿನನಿತ್ಯದ ವಸ್ತುಗಳ ದರವು ಕೂಡ ಏರಿಕೆಯಾಗಿ ಬಡವರು, ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಂತಾಗಿದೆ ಎಂದು ಕವಿಕಾ ಮಾಜಿ ಅಧ್ಯಕ್ಷ ಮನೋಹರ್ ಆಕ್ರೋಶ ವ್ಯಕ್ತಪಡಿಸಿದರು.
ನೋಟ್ ಬ್ಯಾನ್, ಜಿಎಸ್‍ಟಿ ಕೇವಲ ಶ್ರೀಮಂತರಿಗೆ ಅನುಕೂಲವಾಯಿತು. ಬಡವರು ಮತ್ತಷ್ಟು ಸಂಕಷ್ಟಕ್ಕೀಡಾದರು ಎಂದು ಹೇಳಿದರು.
ಶೇಖರ್, ಆನಂದ್, ಹೇಮರಾಜ್, ರಾಮಕೃಷ್ಣ, ಬಾಬು, ಆದಿತ್ಯ, ದರ್ಶನ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡ್ದಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ