ಬೆಂಗಳೂರು, ಸೆ.6- ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾನೂನು ಹಿನ್ನಡೆ ಅನುಭವಿಸಿರುವ ಜಾರಕಿಹೊಳಿ ಸೋದರರು ಕೆರಳಿ ಕೆಂಡವಾಗಿದ್ದಾರೆ.
ನಾಳೆ ನಡೆಯಲಿರುವ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಲಕ್ಷ್ಮೀಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸೋದರರ ನಡುವೆ ಉಂಟಾದ ಬಿಕ್ಕಟ್ಟು ಶಮನಕ್ಕೆ ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಪ್ರಯತ್ನ ಫಲ ನೀಡಿದಂತೆ ಕಂಡು ಬಂದಿಲ್ಲ.
ಕೊನೆ ಕ್ಷಣದವರೆಗೂ ಪಕ್ಷದ ಮುಖಂಡರು ಇಬ್ಬರ ನಡುವೆಉಂಟಾದ ವೈಮನಸ್ಯ ಬಗೆಹರಿಸಲು ಪ್ರಯತ್ನ ನಡೆಸಿದರಾದರೂ ಉಭಯ ಬಣಗಳು ಯಾರಿಗೂ ಜಗ್ಗಿದಂತೆ ಕಂಡು ಬರಲಿಲ್ಲ.
ಶಾಸಕಿ ಹೆಬ್ಬಾಳ್ಕರ್ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ಸಚಿವ ರಮೇಶ್ ಜಾರಕಿಹೊಳಿ ಇಂದು ಬೆಳಗ್ಗೆ ತುರ್ತು ಸಭೆ ಕರೆದು ಚರ್ಚೆ ನಡೆಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನಾಳೆ ನಡೆಯಲಿರುವ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಕೈ ಮೇಲಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಪರೋಕ್ಷ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿರುವ ವಿಷಯ ಮತ್ತೊಂದು ಬಣವನ್ನು ಇನ್ನಷ್ಟು ಕೆರಳಿಸಿದೆ.
ಜಿಲ್ಲೆಯ ಎಲ್ಲಾ ಪಿಡಿಒಗಳ ಸಭೆ ಕರೆದಿದ್ದರೆ ಈ ಕುತೂಹಲ ಅಷ್ಟು ಹೆಚ್ಚಾಗುತ್ತಿರಲಿಲ್ಲ. ಲಕ್ಷ್ಮೀಹೆಬ್ಬಾಳ್ಕರ್ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಿಡಿಒಗಳಿಗೆ ಮಾತ್ರ ನಿನ್ನೆ ತಡರಾತ್ರಿ ಬೆಳಗಾವಿ ತಾಪಂನಿಂದ ತುರ್ತು ನೋಟಿಸ್ ರವಾನಿಸಿರುವುದು ಆಶ್ಚರ್ಯವಾಗಿದೆ.
ಪಿಎಲ್ಡಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಶಾಸಕ ಸತೀಶ್ ಹಾರಕಿಹೊಳಿ ಬೆಂಬಲಕ್ಕೆ ನಿಂತ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮೀಹೆಬ್ಬಾಳ್ಕರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಇದ್ದಕ್ಕಿದ್ದಂತೆ ಪಿಡಿಒಗಳ ಸಭೆ ಕರೆದಿದ್ದಕ್ಕೆ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ್ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಗಮನಕ್ಕೆ ತಾರದೆ ಸಭೆ ನಡೆಸಿರುವ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಒಂದು ಸಾರಿಯೂ ಕೆಡಿಪಿ ಸಭೆ ನಡೆಸದೆ ಒಮ್ಮೆಲೆ ತಾಪಂ ಸಭೆ ಕರೆದಿದ್ದಾರೆ ಎಂದು ಆರೋಪಿಸಿದ್ದಾರೆ.
ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀಹೆಬ್ಬಾಳ್ಕರ್ ಅವರ ನಡುವಿನ ಸ್ನೇಹಕ್ಕೆ ಬೆಳಗಾವಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕುತ್ತು ತಂದಿದೆ. ನಾಳೆ ಚುನಾವಣೆ ಕೂಡ ಫಿಕ್ಸ್ ಆಗಿದೆ.
ಧಾರವಾಡ ಹೈಕೋರ್ಟ್ ಪೀಠ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಬೆಳಗಾವಿಯ ತಹಸೀಲ್ದಾರ್ ಮಂಜುಳಾನಾಯ್ಕ್ ಚುನಾವಣಾ ದಿನಾಂಕ ಘೋಷಿಸಿದ್ದಾರೆ.
ಚುನಾವಣಾ ವಿಚಾರದಲ್ಲಿ ಬೆಳಗಾವಿ ಕಾಂಗ್ರೆಸ್ ನಾಯಕರ ನಡುವೆ ನಡೆಯುತ್ತಿರುವ ಕದನ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ರಾಜಕೀಯ ಕೆಸರೆರಚಾಟ ಮುಂದುವರೆದಿದೆ.
ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲಾಗುತ್ತಿದೆಯೋ, ಇಲ್ಲವೋ ಎನ್ನುವ ಚರ್ಚೆಯೂ ಶುರುವಾಗಿದೆ. ಲಕ್ಷ್ಮೀಹೆಬ್ಬಾಳ್ಕರ್ ಕೋರ್ಟ್ ನೀಡಿರುವ ಆದೇಶ ತಮಗೆ ಸಿಕ್ಕ ಮೊದಲ ಜಯ ಅಂಥ ಭಾವಿಸಿದ್ದಾರೆ.
ಇತ್ತ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಆದೇಶದ ಬಗ್ಗೆ ಇನ್ನೂ ಗೊಂದಲ ಇದೆ. ಅಭಿ ಪಿಚ್ಚರ್ ಬಾಕಿ ಹೈ ಎಂದು ಹೇಳಿಕೆ ನೀಡಿದ್ದಾರೆ. ಚುನಾವಣಾ ವಿಚಾರ ಮುಂದಿಟ್ಟುಕೊಂಡು ಲಕ್ಷ್ಮೀಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸೋದರರ ನಡುವೆ ವಾಗ್ವಾದ ನಡೆಯುತ್ತಿದೆ.
ಪಿಎಲ್ಡಿ ಬ್ಯಾಂಕ್ಗೆ ಈಗಾಗಲೇ 14 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು, 9ಜನ ಹೆಬ್ಬಾಳ್ಕರ್ ಬಣದಲ್ಲಿದ್ದು, ಉಳಿದ 5ಜನ ಸತೀಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಎಲ್ಲಾ ಸದಸ್ಯರಿಗೆ ಭದ್ರತೆ ನೀಡುವಂತೆ ಚುನಾವಣಾಧಿಕಾರಿ ಮಂಜುಳಾನಾಯಕ್ ಪೆÇಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಎರಡು ಬಣಗಳ ನಡುವಿನ ಮುಸುಕಿನ ಗುದ್ದಾಟ ಸರ್ಕಾರಕ್ಕೆ ಕುತ್ತು ತರಲಿದೆ ಎಂದು ಬಿಂಬಿಸಲಾಗುತ್ತಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿ ಬೆಳಗಾವಿಯ ಕಾಂಗ್ರೆಸ್ ಭಿನ್ನಮತ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲಿನ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸ್ಥಳೀಯ ನಾಯಕರೊಂದಿಗೆ ರಾಜ್ಯ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಮಾತನಾಡಿ, ಎಲ್ಲಾ ಪಕ್ಷಗಳಲ್ಲೂ ಗೊಂದಲ ಸಹಜ. ಇಲ್ಲಿನ ಭಿನ್ನಾಭಿಪ್ರಾಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಆರೋಪ-ಪ್ರತ್ಯಾರೋಪಗಳ ನಡುವೆ ನಾಯಕರ ಸಮಜಾಯಿಷಿ, ಉಭಯ ಬಣಗಳ ಪ್ರತಿಷ್ಠೆ ನಡುವೆ ನಾಳೆ ನಡೆಯುವ ಚುನಾವಣೆ ಏನಾಗುತ್ತದೆ? ಫಲಿತಾಂಶದ ನಂತರ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.