ಬೆಂಗಳೂರು, ಸೆ.6- ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಇತ್ತೀಚೆಗೆ ತನ್ನ ಪ್ರಥಮ ಸಂಕೀರ್ಣ ಮಕ್ಕಳ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
ಹದಿಮೂರು ವರ್ಷದ ಬಾಲಕ ಡೈಲೇಟೆಡ್ ಕಾರ್ಡಿಯೋಮಯೋಪಥಿ (ಹೃದಯದ ಮಾಂಸಖಂಡ ದುರ್ಬಲಗೊಂಡು ರಕ್ತವನ್ನು ಪಂಪ್ ಮಾಡುವ ಸಾಮಥ್ರ್ಯ ಕಡಿಮೆಯಾಗುವ ಸ್ಥಿತಿ)ಯಿಂದ ಬಳಲುತ್ತಿದ್ದನು.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅಪಘಾತವೊಂದರಲ್ಲಿ ಮೆದುಳಿನ ಸಾವಿಗೆ ಗುರಿಯಾಗಿದ್ದ 20 ವರ್ಷ ವಯಸ್ಸಿನ ಯುವಕನಿಂದ ಹೃದಯವನ್ನು ಸಂಗ್ರಹಿಸಲಾಗಿತ್ತು.
ಆಸ್ಪತ್ರೆಯ ವಿಶೇಷ ತಜ್ಞರ ತಂಡ ಹೃದಯವನ್ನು ಹೊರ ತೆಗೆಯಲು ತೆರಳಿದ್ದರು. ನಂತರ ಗ್ರೀನ್ ಕಾರಿಡಾರ್ ಮಾರ್ಗದ ಮೂಲಕ ಸುಮಾರು ಒಂದು ಗಂಟೆಗೂ ಹೆಚ್ಚಿನ ಅವಧಿಯಲ್ಲಿ ಅದನ್ನು ನಗರಕ್ಕೆ ತರಲು ನೆರವಾಗಿದ್ದರು.
ಹೃದಯದ ಕಸಿ ಶಸ್ತ್ರಚಿಕಿತ್ಸೆಯನ್ನು ದೇಶದ ಇಬ್ಬರು ಖ್ಯಾತ ಹೃದಯ ಶಸ್ತ್ರಚಿಕಿತ್ಸಾ ತಜ್ಞರಾದ ಚೆನ್ನೈನ ಫೋರ್ಟಿಸ್ ಮಲರ್ ಆಸ್ಪತ್ರೆಯ ಮುಖ್ಯ ಹೃದಯ ಮತ್ತು ಎದೆಭಾಗದ ಮತ್ತು ಕಸಿ ಶಸ್ತ್ರಚಿಕಿತ್ಸಾ ತಜ್ಞ, ಹೃದಯ ವಿಜ್ಞಾನದ ನಿರ್ದೇಶಕ ಡಾ.ಕೆ.ಆರ್.ಬಾಲಕೃಷ್ಣನ್, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದಯ ರಕ್ತನಾಳ ವಿಜ್ಞಾನ ವಿಭಾಗದ ಚೇರ್ಮನ್ ಹಾಗೂ ಮುಖ್ಯ ಹೃದಯ ಮತ್ತು ಎದೆಭಾಗದ ಹಾಗೂ ರಕ್ತನಾಳಗಳ ಶಸ್ತ್ರಚಿಕಿತ್ಸಾ ತಜ್ಞ ಡಾ.ವಿವೇಕ್ ಜವಳಿ ಅವರು ನೆರವೇರಿಸಿದರು.
ಅಂತಾರಾಜ್ಯ ಸಮನ್ವಯ ಮತ್ತು ಕ್ಷಿಪ್ರಗತಿಯ ಕಾರ್ಯನಿರ್ವಹಣೆಯಿಂದ ಕಾಲಕ್ಕೆ ತಕ್ಕಂತೆ ಹೃದಯ ಕಸಿ ಕ್ರಮವನ್ನು ಕೈಗೊಳ್ಳಲು ಅವಕಾಶ ಲಭಿಸಿತ್ತು. ಹೃದಯವನ್ನು ಸ್ವೀಕರಿಸಿದ ಬಾಲಕ ಅಂತಿಮ ಹಂತದ ಹೃದಯ ವೈಫಲ್ಯದ ಗಂಭೀರ ಸ್ಥಿತಿಯಲ್ಲಿದ್ದು, ಅವನಿಗೆ ಹೃದಯ ಕಸಿ ಅತ್ಯಂತ ಅಗತ್ಯವಾಗಿತ್ತು.
ಈ ಬಾಲಕ ಆರು ಗಂಟೆಗಳ ನಂತರ ವೆಂಟಿಲೇಟರ್ನಿಂದ ಹೊರಬಂದಿದ್ದು, ಸರಾಗವಾಗಿ ಚೇತರಿಸಿಕೊಂಡಿದ್ದಾನೆ. ಮಗುವಿನ ಸಾಮಾಜಿಕ, ಆರ್ಥಿಕ ಸ್ಥಿತಿ ಕಳಪೆಯಾಗಿರುವುದರಿಂದ ಅವನನ್ನು ಸ್ವಲ್ಪ ಹೆಚ್ಚಿನ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಉತ್ತಮ ಚೇತರಿಕೆಯ ಖಾತ್ರಿ ಮಾಡಿಕೊಳ್ಳಲಾಗಿತ್ತು. ನಂತರ ದೀರ್ಘ ಅವಧಿಯವರೆಗೆ ಸಲಹೆ ನೀಡಲಾಗಿತ್ತು. ಹೃದಯದ ಅಂಗಾಂಶ ಪರೀಕ್ಷೆ ಸೇರಿದಂತೆ ಎಲ್ಲಾ ವರದಿಗಳು ಈ ನೂತನ ಅಂಗವನ್ನು ಅವನ ದೇಹ ಉತ್ತಮ ರೀತಿಯಲ್ಲಿ ಸ್ವಾಗಿತಿಸಿದೆ ಎಂಬುದನ್ನು ತಿಳಿಸಿದೆ.