ಸೌಹಾರ್ದ ಸಂಯುಕ್ತ ಸಹಕಾರ ಕಾಯ್ದೆ ತಿದ್ದುಪಡಿ-ಸಂಸ್ಥೆಯ ಅಧ್ಯಕ್ಷ ಬಿ.ಎಚ್.ಕೃಷ್ಣರೆಡ್ಡಿ ಆಗ್ರಹ

 

ಬೆಂಗಳೂರು,ಸ.5- ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಸಂಸ್ಥೆಗಳ ಸುಗಮ ಆಡಳಿತಕ್ಕೆ ಅನುಕೂಲವಾಗುವಂತೆ ನೂತನ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಸಂಸ್ಥೆಯ ಅಧ್ಯಕ್ಷ ಬಿ.ಎಚ್.ಕೃಷ್ಣರೆಡ್ಡಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸೌಹಾರ್ದ ಕಾಯ್ದೆಯಡಿ ಸುಮಾರು 4.5 ಸಾವಿರ ಸಹಾಕರ ಸಂಸ್ಥೆಗಳು ಮುನ್ನಡೆಯಾಗಿವೆ. ಇವುಗಳನ್ನು ಸುಮಾರು 8 ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ನೋಂದಣಿಯಾಗಿರುವ ಸಂಸ್ಥೆಗಳಿಗೆ ಈಗಿನ ಕಾಯ್ದೆಯಲ್ಲಿ ಕೆಲವು ಅನಾನುಕೂಲಗಳಿವೆ. ಚುನಾವಣೆ ನಡೆಸುವುದು ಸ್ವಯಂಪ್ರೇರಿತ ವಿಚಾರಣೆ ಮತ್ತು ಲೆಕ್ಕಪರಿಶೋಧನೆ ವಿಷಯಗಳು ಸಹಕಾರ ಇಲಾಖೆಯ ವ್ಯಾಪ್ತಿಗೊಳಪಡುತ್ತಿವೆ. ಅದನ್ನು ತಿದ್ದುಪಡಿ ಮಾಡಿ 1987ರ ಕಾಯ್ದೆಯಲ್ಲಿದ್ದಂತೆ ಮುಂದುವರೆಸಬೇಕು ಎಂದರು.

ಸೌಹಾರ್ದ ಸಂಯುಕ್ತ ಸಂಸ್ಥೆ ಈಗಾಗಲೇ ಬೆಂಗಳೂರಿನ ಮಾರ್ಗೋಸ ರಸ್ತೆ ಮತ್ತು ಬೆಳಗಾವಿಯಲ್ಲಿ ಸ್ವಂತ ನಿವೇಶನ ಹೊಂದಿದೆ. ಮೈಸೂರು, ಗುಲ್ಬರ್ಗದಲ್ಲೂ ನಿವೇಶನ ಹೊಂದುವ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ 6 ಮಹಡಿಗಳ ಕಟ್ಟಡ ನಿರ್ಮಾಣ ಆರಂಭವಾಗಿದೆ.
ತುಮಕೂರು-ಬೆಂಗಳೂರು ರಸ್ತೆಯಲ್ಲಿ ಸುಮಾರು 5 ಎಕರೆ ಜಾಗ ಖರೀದಿ ಮಾಡಿ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದು ಹೇಳಿದರು.

ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ಠೇವಣಿದಾರರ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಯಾವುದೇ ಸಂಸ್ಥೆಯ ಅಧಿಕಾರಿಗಳು ಮೋಸ ಮಾಡಲು ಯತ್ನಿಸಿದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಆದರೆ ಈವರೆಗೂ ಅಂತಹ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದರು.
ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದೆ. ಹೀಗಾಗಿ ಸೆ.7ರಂದು ನಗರದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್‍ನಲ್ಲಿ 17ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಂದು ಸುಮಾರು 4.5 ಸಾವಿರ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲೇ ಬೆಳೆದು ಸಚಿವರಾಗಿರುವ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಂಶಪೂರ್, ವೆಂಕಟರಾವ್ ನಾಡಗೌಡ, ಮಾಂತೇಶ್ ಕವಟಗಿ ಮಠ ಹಾಗೂ ಸಹಕಾರ ಕ್ಷೇತ್ರದಿಂದ ಬೆಳೆದು ಬಂದು ಶಾಸಕರಾಗಿರುವವರನ್ನು ಸಾಮಾನ್ಯಸಭೆಯಲ್ಲಿ ಸನ್ಮಾನಿಸಲಾಗುವುದು.
ಸಹಕಾರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಈವರೆಗೂ ಪ್ರಕಟಗೊಂಡಿರುವ ತೀರ್ಪುಗಳ ಸಂಗ್ರಹದ ಪುಸ್ತಕವನ್ನು ಪ್ರಕಟಿಸಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ