ಬೆಂಗಳೂರು, ಸೆ.4- ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯುವ ರಾಜಕೀಯ ಚದುರಂಗದಾಟ ಜೋರಾಗಿದೆ. ನಿನ್ನೆಯಷ್ಟೇ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ಗಳಲ್ಲಿ ಅಧಿಕಾರದ ಗದ್ದುಗೆ ಏರಲು ರಾಜಕೀಯ ದಾಳಗಳನ್ನು ಉರುಳಿಸಲು ಆರಂಭಿಸಿವೆ. ಬಹುಮತ ಬಂದಿರುವೆಡೆ ಅಧಿಕಾರ ಪಡೆಯಲು ಪ್ರಭಾವಿಗಳು ಲಾಬಿ ಆರಂಭಿಸಿದ್ದರೆ, ಬಹುಮತ ಇರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವೆಡೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಲಾಬಿ ಮುಂದುವರಿದಿದೆ.
ಅದೇ ರೀತಿ ಪಕ್ಷೇತರರನ್ನು ತಮ್ಮತ್ತ ಸೆಳೆದು ಸ್ಥಳೀಯ ಸಂಸ್ಥೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮೂರೂ ಪಕ್ಷಗಳು ಪ್ರಯತ್ನ ಮುಂದುವರಿಸಿವೆ. ನಿನ್ನೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಪಕ್ಷಗಳ ಸ್ಥಳೀಯ ಮುಖಂಡರು ಹಲವು ಪಕ್ಷೇತರರೊಂದಿಗೆ ಮಾತುಕತೆ ನಡೆಸಿದ್ದಾರೆ.
ರಾಜ್ಯ ನಾಯಕರು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಹಮತ ವ್ಯಕ್ತಪಡಿಸಿದ್ದರೂ ಸ್ಥಳೀಯವಾಗಿ ಹಲವೆಡೆ ಜೆಡಿಎಸ್ , ಕಾಂಗ್ರೆಸ್ ನಾಯಕರ ನಡುವೆ ಒಮ್ಮತ ಮೂಡಿಬರದಿರುವುದು ಕಂಡುಬಂದಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರ ಬಹಳ ಮುಖ್ಯವಾಗಿರುವುದರಿಂದ ಗದ್ದುಗೆಗೇರಲು ಇನ್ನಿಲ್ಲದ ಕಸರತ್ತನ್ನು ಮುಂದುವರಿಸಿದ್ದಾರೆ.
ತುಮಕೂರು, ಮೈಸೂರು ಮಹಾನಗರ ಪಾಲಿಕೆ ಅತಂತ್ರವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅಧಿಕಾರ ಹಂಚಿಕೆ ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆದಿದೆ. ಈ ನಡುವೆ ಬಿಜೆಪಿ ಈ ಎರಡೂ ಪಾಲಿಕೆಗಳಲ್ಲಿ ಅಧಿಕಾರಕ್ಕೆ ಬರಲು ಕಸರತ್ತು ನಡೆಸಿದೆ. ತುಮಕೂರು ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲು ಬಿಜೆಪಿಗೆ ಇನ್ನೂ ಕೆಲವು ಸ್ಥಾನಗಳ ಅಗತ್ಯವಿದೆ. ಆದರೆ ಇಲ್ಲಿ ಬಿಜೆಪಿ ಮುಖಂಡರು ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇ ಬೇಕು ಎಂಬ ಹಠಕ್ಕೆ ಬಿದ್ದು, ಪಕ್ಷೇತರ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ತುಮಕೂರು ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಇಲ್ಲಿನ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೆಚ್ಚಿನ ಅನುದಾನ ಕೇಂದ್ರದಿಂದ ಸಿಗಲಿದೆ ಎಂದು ಆಮಿಷವೊಡ್ಡಲಾಗುತ್ತಿದೆ.
ಮಾತ್ರವಲ್ಲ ಈ ಬಗ್ಗೆ ಬಹಿರಂಗವಾಗಿಯೇ ಬಿಜೆಪಿ ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಆಹ್ವಾನ ನೀಡಿದ್ದಾರೆ.
ಇನ್ನುಳಿದಂತೆ ನಗರಸಭೆ ಮತ್ತು ಪುರಸಭೆ, ಪಟ್ಟಣ ಪಂಚಾಯತ್ಗಳಲ್ಲಿ ರಾತ್ರೋರಾತ್ರಿ ರಾಜಕಾರಣ ಜೋರಾಗಿಯೆ ಸಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ಪುರಸಭೆ ಅತಂತ್ರವಾಗಿದ್ದು, ಜೆಡಿಎಸ್ ಅಭ್ಯರ್ಥಿಗಳನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದವರೂ ಪ್ರಯತ್ನ ನಡೆಸಿದ್ದಾರೆ. ಎಚ್.ಡಿ.ಕೋಟೆ,ಟಿ.ನರಸೀಪುರ ಪುರಸಭೆಗಳು ಅತಂತ್ರವಾಗಿದ್ದು, ಇಲ್ಲಿ ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ. ಇವರ ಬೆಂಬಲದಿಂದ ಕಾಂಗ್ರೆಸ್ ಅಧಿಕಾರ ಗದ್ದುಗೆ ಗೆ ಏರುವ ಪ್ರಯತ್ನ ನಡೆಸಿದೆ.
ಹಾಸನ ನಗರಸಭೆ ಅತಂತ್ರವಾಗಿದ್ದು, ಇಲ್ಲಿನ ಮೂವರು ಪಕ್ಷೇತರರರು ಮತ್ತು ಇಬ್ಬರು ಕಾಂಗ್ರೆಸ್ ಸದಸ್ಯರೊಂದಿಗೆ ಮಾತುಕತೆ ನಡೆಸಿರುವ ಸಚಿವ ಎಚ್.ಡಿ.ರೇವಣ್ಣ, ಇದನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ಮುಂದುವರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆ ಅತಂತ್ರವಾಗಿದ್ದು, ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರಕ್ಕೆ ಬರಲು ಹಾಗೂ ಬಂಟ್ವಾಳದಲ್ಲಿ ಪಕ್ಷೇತರರೊಂದಿಗೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಉಡುಪಿ ಜಿಲ್ಲೆಯ ಕಾರ್ಕಳ ಪುರಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲ ಸಾಧಿಸಿದ್ದು, ಒಂದು ಸ್ಥಾನ ಗೆದ್ದಿರುವ ಪಕ್ಷೇತರ ಅಭ್ಯರ್ಥಿಗೆ ಫುಲ್ ಡಿಮ್ಯಾಂಡ್. ಈ ಸದಸ್ಯ ಯಾರ ಕಡೆ ಒಲವು ತೋರಿಸುತ್ತಾರೋ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ.
ಬಾಗಲಕೋಟೆ ಜಿಲ್ಲೆ ತೇರದಾಳ ಪುರಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲ ಸಾಧಿಸಿದ್ದು, ಎರಡೂ ಪಕ್ಷಗಳು ಅಧಿಕಾರ ಹಿಡಿಯಲು ಪಕ್ಷೇತರರಿಗೆ ಗಾಳ ಹಾಕಿವೆ. ಇಲ್ಲಿ ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ. ಕೆರೂರು ಪಟ್ಟಣ ಪಂಚಾಯತ್ನಲ್ಲೂ ಪಕ್ಷೇತರರೇ ನಿರ್ಣಾಯಕರಾಗಿದ್ದು, ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬುದರ ಮೇಲೆ ಅಧಿಕಾರ ನಿರ್ಧಾರವಾಗಲಿದೆ.
ಕೊಪ್ಪಳ, ಗಂಗಾವತಿ ನಗರಸಭೆಗಳು ಕೂಡ ಅತಂತ್ರವಾಗಿದ್ದು, ಇಲ್ಲಿಯೂ ಪಕ್ಷೇತರರೇ ನಿರ್ಣಾಯಕರು. ಈ ಎರಡೂ ಕಡೆ ಕಾಂಗ್ರೆಸ್ ಜೊತೆ ಜೆಡಿಎಸ್ ಕೈಜೋಡಿಸುವ ಸಾಧ್ಯತೆ ಇದೆ.
ಬಳ್ಳಾರಿಯ ಕೊಟ್ಟೂರು ಪಟ್ಟಣ ಪಂಚಾಯತ್ ಕೂಡ ಅತಂತ್ರವಾಗಿದ್ದು, ಗೆದ್ದ ಮೂರು ಪಕ್ಷೇತರರ ಬೆಂಬಲ ಪಡೆಯಲು ಕಾಂಗ್ರೆಸ್, ಬಿಜೆಪಿ ಭಾರಿ ಪ್ರಯತ್ನ ನಡೆಸಿದ್ದು, ಸ್ಥಳೀಯ ಬಿಜೆಪಿ ಮುಖಂಡರು ನಿನ್ನೆ ತಡರಾತ್ರಿ ಈ ಸದಸ್ಯರೊಂದಿಗೆ ಮಾತುಕತೆ ನಡೆಸಿರುವುದು ತಿಳಿದುಬಂದಿದೆ. ಪಕ್ಷೇತರರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡುವ ಆಮಿಷವೊಡ್ಡಲಾಗಿದೆ.
ರಾಯಚೂರು ಜಿಲ್ಲೆಯ ರಾಯಚೂರು ನಗರಸಭೆ, ದೇವದುರ್ಗ ಪುರಸಭೆ, ಮಾನ್ವಿ ಪುರಸಭೆಗಳು ಅತಂತ್ರವಾಗಿದ್ದು, ಇಲ್ಲಿಯೂ ಪಕ್ಷೇತರರು ನಿರ್ಣಾಯಕರಾಗಿದ್ದಾರೆ. ಇವರು ಯಾರ ಕಡೆ ಒಲವು ತೋರಿಸುತ್ತಾರೆ ಎಂಬುದರ ಮೇಲೆ ಪುರಸಭೆಗಳ ಅಧಿಕಾರ ನಿರ್ಧಾರವಾಗಲಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪುರಸಭೆ ಅತಂತ್ರವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಅಥವಾ ಬಿಜೆಪಿ-ಪಕ್ಷೇತರರು ಸೇರಿ ಆಡಳಿತ ನಡೆಸುವ ಸಾಧ್ಯತೆ ಇದೆ.