ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅನಿವಾರ್ಯ

ಬೆಂಗಳೂರು, ಸೆ.4-ನಿನ್ನೆ ಪ್ರಕಟಗೊಂಡ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವೆಂಬ ಜನಾದೇಶವನ್ನು ಮತದಾರ ನೀಡಿದ್ದಾನೆ.

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಮಾತ್ರ ಬಿಜೆಪಿ ಎದುರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅನಾಯಾಸವಾಗಿ ಬಿಜೆಪಿಗೆ ಹೆಚ್ಚಿನ ಸ್ಥಾನ ಗೆಲ್ಲಲು ಅನುಕೂಲವಾಗುತ್ತದೆ ಎಂಬುದು ಈ ಫಲಿತಾಂಶದಿಂದಲೇ ಸಾಬೀತಾಗಿದೆ.
ಕಾಂಗ್ರೆಸ್-ಜೆಡಿಎಸ್ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಗಳಲ್ಲಿ ಪಡೆದಿರುವ ಒಟ್ಟು ಸಂಖ್ಯೆಯನ್ನು ಪರಿಗಣಿಸಿದರೆ ಬಿಜೆಪಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಿವೆ.

ಮೂರು ಮಹಾನಗರ ಪಾಲಿಕೆಯ ಒಟ್ಟು 135 ಸ್ಥಾನಗಳಲ್ಲಿ ಬಿಜೆಪಿ 54 ಪಡೆದರೆ, ಕಾಂಗ್ರೆಸ್ 36, ಜೆಡಿಎಸ್ 30(ಒಟ್ಟು 66) ದೋಸ್ತಿ ಪಕ್ಷಗಳ ಪಾಲಾಗುತ್ತದೆ.
ನಗರಸಭೆಯ ಒಟ್ಟು 926 ಸ್ಥಾನಗಳಲ್ಲಿ ಬಿಜೆಪಿ 370, ಕಾಂಗ್ರೆಸ್ 294 ಹಾಗೂ ಜೆಡಿಎಸ್ 106(ಒಟ್ಟು 400). ಪುರಸಭೆಯ 1246 ಸ್ಥಾನಗಳಲ್ಲಿ ಬಿಜೆಪಿ 375, ಕಾಂಗ್ರೆಸ್ 514, ಜೆಡಿಎಸ್ 210 (ಒಟ್ಟು 724). ಪಟ್ಟಣ ಪಂಚಾಯ್ತಿಯ 355 ಸ್ಥಾನಗಳ ಪೈಕಿ ಬಿಜೆಪಿ 130, ಕಾಂಗ್ರೆಸ್ 138, ಜೆಡಿಎಸ್ 29 (ಒಟ್ಟ 167) ಸ್ಥಾನಗಳನ್ನು ಪಡೆದಿವೆ.

ಇದನ್ನು ಶೇಕಡಾವಾರು ಮತದಾನಕ್ಕೆ ಹೋಲಿಸಿದರೆ ಬಿಜೆಪಿ 35.25, ಕಾಂಗ್ರೆಸ್ 36.25 ಹಾಗೂ ಜೆಡಿಎಸ್ 14.7 ಶೇಕಡಾವಾರು ಮತ ಪಡೆದಿದೆ. ಕಾಂಗ್ರೆಸ್, ಜೆಡಿಎಸ್ ಪಡೆದಿರುವ ಶೇಕಡಾವಾರು ಮತದಾವನ್ನು ಲೆಕ್ಕ ಹಾಕಿದರೆ 50.32ರಷ್ಟಾಗುತ್ತದೆ.
ಲೋಕಸಭೆ ಚುನಾವಣೆಗೆ ಇದನ್ನು ಅನ್ವಯಿಸಿದರೆ ಉಭಯ ಪಕ್ಷಗಳ ಸಾಧ್ಯವಾದ ಕಡೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ಕನಿಷ್ಠ 18ರಿಂದ 20 ಸ್ಥಾನಗಳನ್ನು ಗೆಲ್ಲಲು ಸಹಾಯವಾಗುವ ಲಕ್ಷಣಗಳಿವೆ.

2013ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಹೋಲಿಕೆ ಮಾಡಿದರೆ. ಬಿಜೆಪಿ ಈ ಬಾರಿ ಶೇ.8.73ರಷ್ಟು ಹೆಚ್ಚುವರಿ ಮತ ಪಡೆದಿದೆ. ಕಾಂಗ್ರೆಸ್ ಶೇ.-2.07 ಮತವನ್ನು ಕಳೆದುಕೊಂಡಿದ್ದರೆ, ಜೆಡಿಎಸ್‍ಗೂ ಶೇ.-2.25ರಷ್ಟು ನಷ್ಟವಾಗಿದೆ.
2013ರ ಚುನಾವಣೆಯಲ್ಲಿ ಬಿಜೆಪಿ ಶೇ.26.5ರಷ್ಟು ಮತ ಪಡೆದರೆ, ಕಾಂಗ್ರೆಸ್ 38.32 ಹಾಗೂ ಜೆಡಿಎಸ್ 16.65 ಮತ ಪಡೆದಿತ್ತು. ಈ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದರೆ ಮೈತ್ರಿ ಪಕ್ಷಕ್ಕೆ ಮತದಾರ ಕೈ ಹಿಡಿದಿದ್ದು, ಭವಿಷ್ಯದಲ್ಲಿ ಉಭಯ ಪಕ್ಷಗಳು ಜತೆ ಜತೆಯಾಗಿ ಸಾಗಿದರೆ ಮಾತ್ರ ಭವಿಷ್ಯವಿದೆ ಎಂಬುದನ್ನು ಸಾರಿದ್ದಾನೆ.

ಇನ್ನು ವಲೆಯವಾರು ಚುನಾವಣೆ ಫಲಿತಾಂಶದಲ್ಲಿ ಹಳೆಯ ಕರ್ನಾಟಕ ಭಾಗದಲ್ಲಿ ಜೆಡಿಎಸ್ ತನ್ನ ಕೋಟೆಯನ್ನು ಭದ್ರಪಡಿಸಿಕೊಂಡಿದ್ದರೆ, ಬಿಜೆಪಿ ಎಂದಿನಂತೆ ಕರಾವಳಿ, ಮಧ್ಯಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ.
ಕಾಂಗ್ರೆಸ್ ಹೈದರಾಬಾದ್ ಕರ್ನಾಟಕದಲ್ಲಿ ಉತ್ತಮ ಸಾಧನೆ ಮಾಡಿದ್ದರೆ, ಮೈಸೂರು ಭಾಗದಲ್ಲಿ ಅದರ ಸ್ಥಿತಿ ದಯಾನೀಯವಾಗಿದೆ. ಮೈಸೂರು ಭಾಗದಲ್ಲಿ ಬಿಜೆಪಿ ವಿಸ್ತರಣೆ ಹೆಚ್ಚಾಗಿದ್ದು, ಪಾಲಿಕೆಯಲ್ಲಿ 22 ಸ್ಥಾನಗಳನ್ನು ಪಡೆಯುವ ಮೂಲಕ ಲೋಕಸಭೆ ಚುನಾವಣೆಗೆ ಭದ್ರ ಅಡಿಪಾಯ ಹಾಕಿಕೊಂಡಿದೆ.
ಸದ್ಯಕ್ಕೆ ಕಾಂಗ್ರೆಸ್-ಜೆಡಿಎಸ್ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡರೆ ಮಾತ್ರ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಹಾಕಬಹುದು. ಒಂದು ವೇಳೆ ಪ್ರತಿಷ್ಠೆಗೆ ಅಂಟಿಕೊಂಡರೆ ಬಿಜೆಪಿಯ ಕಮಲ ಮತ್ತೆ ರಾಜ್ಯದಲ್ಲಿ ಅರಳಲು ಎರಡೂ ಪಕ್ಷಗಳೇ ದಾರಿ ಮಾಡಿಕೊಟ್ಟಂತಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ