ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಿನ್ನಡೆಯಾಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಜನಪ್ರಿಯತೆ ಕುಗ್ಗತೊಡಗಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರ ಹಿಡಿಯುವುದು ದುಸ್ತರವಾಗಿದೆ. ಒಂದು ವೇಳೆ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದರೂ ಆ ಪಕ್ಷಗಳು ಪ್ರಧಾನಮಂತ್ರಿ ಬದಲಾವಣೆಗೆ ಪಟ್ಟು ಹಿಡಿಯಬಹುದು ಎಂದು ಭಾರತದ ಚುನಾವಣಾ ವಿಷಯಗಳಲ್ಲಿ ತಜ್ಞರಾಗಿರುವ ಜೇಮ್ಸ್ ಮೇನರ್ ಸಿಎಸ್ಡಿಎಸ್–ಲೋಕನೀತಿಯ ಸಮೀಕ್ಷೆಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಸಿಎಸ್ಡಿಎಸ್–ಲೋಕನೀತಿಯ ಸಮೀಕ್ಷೆಯನ್ನು ದಿ ವೈರ್ ಸುದ್ದಿ ತಾಣ ಪ್ರಕಟಿಸಿದೆ. ಸಿಎಸ್ಡಿಎಸ್–ಲೋಕನೀತಿ ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಂತೆ ಕಳೆದ ಜನವರಿಯಿಂದ ಬಿಜೆಪಿಯ ಜನಪ್ರಿಯತೆ ಕುಸಿಯತೊಡಗಿದ್ದು, ಬಿಜೆಪಿಗಿದ್ದ ರೈತರ ಬೆಂಬಲ ಶೇ 49 ರಿಂದ 24ಕ್ಕೆ ಕುಸಿದಿದೆ. ಶೇ 22 ರಷ್ಟಿದ್ದ ಪರಿಶಿಷ್ಟ ಜಾತಿಯವರು ಬೆಂಬಲ ಶೇ 8ಕ್ಕೆ ಇಳಿದಿದೆ. ಸಮೀಕ್ಷೆಯಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ವ್ಯಕ್ತವಾಗಿರುವ ಅಭಿಪ್ರಾಯಗಳ ವಿವರ ಇಂತಿದೆ.
*ಶೇ 61 ರಷ್ಟು ಜನರು ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.
* ಶೇ 55 ರಷ್ಟು ಜನರು ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಿಗ್ರಹಿಸುವಲ್ಲೂ ವಿಫಲವಾಗಿದೆ ಎಂದಿದ್ದಾರೆ.
* ಶೇ 61 ರಷ್ಟು ಜನರು ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ ಎಂದು ಹೇಳಿದ್ದಾರೆ.
* ಶೇ 64 ರಷ್ಟು ಜನರು ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
* ಶೇ 57 ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಜಿಸುವಲ್ಲಿ ವಿಫಲರಾಗಿದ್ದು 2014ರಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.
* ಶೇ 47 ರಷ್ಟು ಜನರು ಸರ್ಕಾರದ ಒಟ್ಟಾರೆ ಆಡಳಿತ ವೈಖರಿ ತೃಪ್ತಿ ತಂದಿಲ್ಲ ಎಂದು ಹೇಳಿದ್ದಾರೆ.
* ಶೇ 38 ರಷ್ಟು ಜನರು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಮತ್ತೆ ಅಧಿಕಾರಕ್ಕೆ ತರುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ರಾಜ್ಯವಾರು ಸ್ಥಾನಗಳಿಕೆಯ ಲೆಕ್ಕಚಾರ ನೋಡುವುದಾದರೆ, ಒಡಿಶಾದಲ್ಲಿ 2014ರಲ್ಲಿ ಕೇವಲ ಒಂದು ಸ್ಥಾನ ಪಡೆದಿದ್ದ ಬಿಜೆಪಿ ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಬಿಜೆಪಿ 21 ಸ್ಥಾನಗಳ ಪೈಕಿ 10 ರಿಂದ 15 ಸ್ಥಾನ ಗೆಲ್ಲುವ ಅವಕಾಶ ಹೊಂದಿದೆ.
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ತನ್ನ ಸ್ಥಿತಿಯನ್ನು ಉತ್ತಮಪಡಿಸಿಕೊಂಡಿದೆ. ಅಸ್ಸಾಂನ 14 ಸ್ಥಾನಗಳ ಪೈಕಿ 7 ರಲ್ಲಿ ಗೆಲ್ಲುವ ಅವಕಾಶವಿದೆ. ಆದರೂ ಇದು ಬಿಜೆಪಿಗೆ ಹಿನ್ನಡೆ ಎಂದೇ ಸಮೀಕ್ಷೆಯಲ್ಲಿ ಹೇಳಲಾಗಿದೆ. ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಕೆಲವು ಸ್ಥಾನಗಳನ್ನು ಪಡೆಯಲಿದೆ. 2014ರಲ್ಲಿ 42 ಸ್ಥಾನಗಳ ಪೈಕಿ ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿತ್ತು.
ದೆಹಲಿ (7 ಸ್ಥಾನಗಳ ಪೈಕಿ 7) ಹರಿಯಾಣ (10 ಸ್ಥಾನಗಳ ಪೈಕಿ 7) ಛತೀಸ್ಗಢ (11ಸ್ಥಾನಗಳ ಪೈಕಿ 10), ಗುಜರಾತ್ (26 ಸ್ಥಾನಗಳ ಪೈಕಿ 26) ಉತ್ತರಾಖಂಡ ( 5 ಸ್ಥಾನಗಳ ಪೈಕಿ 5) ಹಿಮಾಚಲ ಪ್ರದೇಶ ( 4 ಸ್ಥಾನಗಳ ಪೈಕಿ 4) ರಾಜ್ಯಗಳಲ್ಲಿ ಬಿಜೆಪಿ ಕಳೆದ ಬಾರಿ ಒಟ್ಟು 63 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಆದರೆ 2019ರ ಚುನಾವಣೆಯಲ್ಲಿ ಬಿಜೆಪಿ ಈ ರಾಜ್ಯಗಳಲ್ಲಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳಲಿದೆ.
ಬಿಹಾರ (40 ಸ್ಥಾನಗಳ ಪೈಕಿ 22), ಜಾರ್ಖಂಡ್ (14 ಸ್ಥಾನಗಳ ಪೈಕಿ 12) ಕರ್ನಾಟಕ (28 ಸ್ಥಾನಗಳ ಪೈಕಿ 17) ರಾಜ್ಯಗಳಲ್ಲೂ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡರೂ ಗರಿಷ್ಠ ಪ್ರಮಾಣದ ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಸಮೀಕ್ಷೆ ತಿಳಿಸಿದೆ.
ಉತ್ತರಪ್ರದೇಶ ರಾಜ್ಯದಲ್ಲಿ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷ ಹಾಗೂ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳು ಮೈತ್ರಿ ಮಾಡಿಕೊಂಡರೇ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ, ಕಳೆದ ಬಾರಿ ಇಲ್ಲಿ ಬಿಜೆಪಿ 80 ಸ್ಥಾನಗಳ ಪೈಕಿ 71 ಲೋಕಸಭಾ ಸ್ಥಾನಗಳನ್ನು ಪಡೆದಿತ್ತು.
ಒಟ್ಟಾರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಮಧ್ಯಪ್ರದೇಶದಲ್ಲಿ ಕಳೆದ ಬಾರಿ ಬಿಜೆಪಿ 29 ಸ್ಥಾನಗಳ ಪೈಕಿ 27ರಲ್ಲಿ ಗೆಲುವು ಸಾಧಿಸಿತ್ತು. ಆದರೆ ಇತ್ತೀಚಿನ ಸಮೀಕ್ಷೆ ಪ್ರಕಾರ ಅಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ರಾಜಸ್ಥಾನದಲ್ಲಿ ಬಿಜೆಪಿ ಕಳೆದ ಸಲ ಎಲ್ಲಾ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಇಲ್ಲಿ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ. 2014ರಲ್ಲಿ ಈ ಎರಡು ರಾಜ್ಯಗಳಿಂದ ಬಿಜೆಪಿ 52 ಸ್ಥಾನಗಳನ್ನು ಪಡೆದಿತ್ತು.
ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿನ 102 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಕಳೆದ ಬಾರಿ ನಾಲ್ಕು ಸ್ಥಾನಗಳನ್ನು ಮಾತ್ರ ಪಡೆದಿತ್ತು. ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಆಂಧ್ರಪ್ರದೇಶದಲ್ಲಿ ಗೆಲ್ಲಲಾಗಿತ್ತು. ಇಲ್ಲಿ ಟಿಡಿಪಿ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿ ಆಂಧ್ರದಲ್ಲಿ ಎರಡು ಸ್ಥಾನಗಳನ್ನು ಪಡೆದಿತ್ತು. 2019ರಲ್ಲಿ ಈ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಿಜೆಪಿ ಕಷ್ಟವಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸುಧಾರಣೆಯಾದಂತೆ ಕಂಡು ಬಂದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.
ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕಾದರೆ 272 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಹಿನ್ನಡೆಯಲ್ಲಿರುವ ಬಿಜೆಪಿ 200 ಸ್ಥಾನಗಳನ್ನು ಗೆದ್ದರೂ ಅಂಗ ಪಕ್ಷಗಳ ನೆರವಿನಿಂದ ಸರ್ಕಾರ ರಚಿಸಬೇಕು. ಪ್ರಧಾನಿ ಮೋದಿ ಅವರ ಸರ್ವಾಧಿಕಾರಿ ದೋರಣೆಯಿಂದ ಬೇಸತ್ತಿರುವ ಎನ್ಡಿಎ ಅಂಗಪಕ್ಷಗಳು ಪ್ರಧಾನಿ ಬದಲಾವಣೆಗೆ ಪಟ್ಟು ಹಿಡಿಯಬಹುದು.
ಆದಾಗ್ಯೂ ಕೆಲವು ರಾಜ್ಯಗಳಲ್ಲಿ ಅಮಿತ್ ಶಾ ಅವರ ಕಾರ್ಯತಂತ್ರ ಮತ್ತು ಮೋದಿ ವರ್ಚಸ್ಸು ಪಕ್ಷಕ್ಕೆ ನೆರವಾಗಲೂಬಹುದು. ಆದರೆ ಬಿಜೆಪಿಯ ‘ಕಾಂಗ್ರೆಸ್ ಮುಕ್ತ ಭಾರತ’ದ ಕನಸು ಮಾತ್ರ ಹಾಗೆಯೇ ಉಳಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ.