ಹೈದರಾಬಾದ್: ಅತ್ತ ಹೈದರಾಬಾದ್ ನಲ್ಲಿ ಸಿಎಂ ಕೆಸಿಆರ್ ಅವಧಿ ಪೂರ್ವ ಚುನಾವಣೆ ಘೋಷಣೆ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿರುವಂತೆಯೇ ಇತ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಅವಧಿ ಪೂರ್ವ ಚುನಾವಣೆಗೆ ಸಿದ್ಧರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಅಮಿತ್ ಶಾ ತೆಲಂಗಾಣ ಬಿಜೆಪಿ ಘಟಕಕ್ಕೆ ಮಾಹಿತಿ ನೀಡಿದ್ದು, ನವೆಂಬರ್-ಡಿಸೆಂಬರ್ಗೆ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಚುನಾವಣೆಗೆ ಸಿದ್ಧರಾಗಿ ಎಂದು ಸಂದೇಶ ನೀಡಿದ್ದಾರೆ. ಇತ್ತೀಚೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರು, ಮಾರ್ಗಮಧ್ಯೆ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಮುಖಂಡ ಬಂಡಾರು ದತ್ತಾತ್ರೇಯ ಮತ್ತು ಪಕ್ಷದ ಇತರೆ ನಾಯಕರನ್ನು ಭೇಟಿ ಮಾಡಿ ಈ ವಿಚಾರ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ನಡುವೆ ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಂಡಾರು ದತ್ತಾತ್ರೆಯ ಅವರು, ಅವಧಿ ಪೂರ್ವ ಚುನಾವಣೆ ಕುರಿತು ರಾಷ್ಟ್ರಾಧ್ಯಕ್ಷರು ಮಾಹಿತಿ ನೀಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದು, ಯಾವುದೇ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಇತ್ತ ನಿಜಾಮಬಾದ್ ಶಾಸಕಿ ಹಾಗೂ ಕೆಸಿಆರ್ ಪುತ್ರಿ ಕವಿತಾ, ರಾಜ್ಯದಲ್ಲಿ ವಿರೋಧ ಪಕ್ಷಗಳ ಸೊಲ್ಲೇ ಇಲ್ಲ. ಹಾಗೇನಾದರೂ ಇದ್ದರೆ ಅವರದ್ದು ಎರಡನೇ ಸ್ಥಾನ ಎಂದು ಹೇಳಿಕೆ ನೀಡಿದ್ದಾರೆ. ನಾಲ್ಕು ವರ್ಷ ಮುಖ್ಯಮಂತ್ರಿ ಕಾರ್ಯನಿರ್ವಹಿಸಿರುವ ಕೆಸಿಆರ್ ಅವರು, ರಾಜ್ಯದಲ್ಲಿನ ಜನರ ನಾಡಿ ಮಿಡಿತ ಅರಿಯಲು ಸಮೀಕ್ಷೆ ಮಾಡಿಸಿದ್ದಾರೆ ಎನ್ನಲಾಗಿದ್ದು, ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲದಿರುವುದು ಮತ್ತು ಸಮೀಕ್ಷೆಯಲ್ಲಿ ಭಾರಿ ಪ್ರಮಾಣದ ಸೀಟು ಗೆಲ್ಲುವ ಮುನ್ಸೂಚನೆ ಸಿಕ್ಕಿದೆ ಎಂದು ಹೇಳಲಾಗಿದೆ.
ಇದೇ ಕಾರಣಕ್ಕೆ ಕೆಸಿಆರ್ ಅವಧಿ ಪೂರ್ವ ಚುನಾವಣೆಗೆ ಕರೆ ನೀಡುವ ಸಾಧ್ಯತೆ ಇದೆ ಹೇಳಲಾಗಿದೆ.