ಬೆಂಗಳೂರು,ಸೆ.2-ಕೊಡಗಿನಲ್ಲ್ಲಾದ ಅತಿವೃಷ್ಟಿಗೆ ಸಿಲುಕಿದ ಜನರಿಗಾಗಿ ಕೇವಲ ದೇಣಿಗೆ ಸಂಗ್ರಹ ಕಾರ್ಯಕ್ರಮ ಇದಲ್ಲ. ಪ್ರಕೃತಿಯನ್ನು ವಿಕೃತಿ ಮಾಡದಂತೆ ನೋಡಿಕೊಳ್ಳಬೇಕೆಂಬ ಜಾಗೃತಿ ಜಾಥಾ ಸಹ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಇಂದು ಬೆಳಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನದ ವಿಜಯನಗರ ಶಾಖಾ ಮಠದ ಆವರಣದಿಂದ ಆರಂಭಗೊಂಡ ಕೊಡಗಿಗೆ ನಮ್ಮ ಕೊಡುಗೆ ಪಾದಯಾತ್ರೆ ವೇಳೆ ಮಾತನಾಡಿದ ಅವರು, ಭೂತಾಯಿ ನಮ್ಮೆಲ್ಲರ ಕೃತ್ಯವನ್ನು ಸಹಿಸಿಕೊಂಡಿದ್ದಾಳೆ. ಆ ತಾಯಿ ಸ್ವಲ್ಪ ಮೈ ಮುರಿದರೆ ಭೂಕಂಪವಾಗುತ್ತದೆ. ಈ ಬಗ್ಗೆ ನಾವೆಲ್ಲರೂ ಎಚ್ಚರವಾಗಿರಲು ಪ್ರಕೃತಿಯೊಂದಿಗೆ ನಡೆಯಬೇಕಿದೆ ಎಂದರು.
ಪ್ರತಿಯೊಬ್ಬರೂ ಮೂರ್ನಾಲ್ಕು ಗಿಡಗಳನ್ನು ನೆಡುವುದರ ಮೂಲಕ ಭೂತಾಯಿಯ ಸಂರಕ್ಷಿಸೋಣ. ಕೊಡಗಿನ ಅತಿವೃಷ್ಟಿ ಇಡೀ ದೇಶ ಹಾಗೂ ಪ್ರಪಂಚವೇ ನೋಡಿದೆ. 90 ವರ್ಷಗಳ ಬಳಿಕ ಕೊಡಗು, ಚಿಕ್ಕಮಗಳೂರಿನ ಕೆಲ ಭಾಗ, ಹಾಸನ ತಾಲೂಕುಗಳಿಗೆ ಸಾಕಷ್ಟು ಹಾನಿಯಾಗಿದೆ. ಅವರ ಸಂಕಷ್ಟಕ್ಕೆ ಇಡೀ ರಾಜ್ಯವೇ ಸ್ಪಂದಿಸುತ್ತಿದೆ. ಕೊಡಗಿನ ಭಾಗದಲ್ಲಿರುವ ಜನರ ಪರವಾಗಿ ದೇವರನ್ನು ಪ್ರಾರ್ಥಿಸೋಣ ಎಂದು ಹೇಳಿದರು.
ಈ ಕಾರ್ಯಕ್ರಮ ಇಲ್ಲಿಗೇ ನಿಲ್ಲುವುದಿಲ್ಲ. ಬೇರೆ ಬೇರೆ ಸ್ಥಳಗಳಲ್ಲೂ ನಡೆಸಲು ಸಲಹೆ ನೀಡಿದ್ದಾರೆ. ಅದಕ್ಕೆ ಬದ್ಧವಾಗಿ ಜನರ ನೆರವಿಗೆ ನಿಲ್ಲಲು ನಾವು ಬದ್ಧರಾಗಿದ್ದೇವೆ ಚುಂಚನಶ್ರೀ ತಿಳಿಸಿದರು.
ಪಾದಯಾತ್ರೆ ಆರಂಭದಲ್ಲಿ ಮಾತನಾಡಿದ್ದ ಶ್ರೀಗಳು, ಕೊಡಗು ನಮ್ಮ ನಾಡು, ನಮ್ಮ ಉಸಿರು. ದೇಹದ ಭಾಗದಂತಿರುವ ಕೊಡಗು ಎಲ್ಲವನ್ನು ಕೊಟ್ಟು, ಇಂದು ಎಲ್ಲವನ್ನು ಕಳೆದುಕೊಂಡಿದೆ. ಪ್ರಕೃತಿ ವಿಕೋಪದಿಂದ ನಲುಗಿ ನಿರಾಶ್ರಿತರಾದವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ. ಕೊಡಗು ಕಟ್ಟುವುದು ನಮ್ಮ ಕೆಲಸ. ಅದಕ್ಕಾಗಿ ಮಠದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು. ಇಡೀ ಪಾದಯಾತ್ರೆಯಲ್ಲಿ ಎಲ್ಲ ಧರ್ಮಗಳ ಪಾದ್ರಿಗಳು, ಧರ್ಮಗುರುಗಳು, ಮೌಲ್ವಿಗಳು, ರಾಜಕೀಯ ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಂಡು ಕೈಲಾದಷ್ಟು ದೇಣಿಗೆ ನೀಡುವಂತೆ ಮನವಿ ಮಾಡಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಈವರೆಗೂ ಕೊಡಗಿನ ಜನರ ಆನಂದಬಾಷ್ಪವನ್ನು ಕಂಡಿದ್ದೇವೆ. ಆದರೆ ಇದೀಗ ಸಂತ್ರಸ್ತರಾಗಿ ಕಣ್ಣೀರು ಸುರಿಸುತ್ತಿರುವ ಅವರ ಆಕ್ರಂದನವನ್ನು ಆಲಿಸಿ ಅವರ ಕಷ್ಟಗಳಿಗೆ ನೆರವಾಗಬೇಕಿದೆ ಎಂದು ತಿಳಿಸಿದರು.
ಕೊಡಗಿನವರಿಗೆ ಮನೆ ಕಟ್ಟಿ ಕೊಡಬಹುದು, ಆದರೆ ಆಸ್ತಿ-ಪಾಸ್ತಿ ಮರುಸಂಪಾದನೆ ಮಾಡಿಕೊಡಲು ಸಾಧ್ಯವಿಲ್ಲ. ಅಲ್ಲೇ ಹುಟ್ಟುವ ಕಾವೇರಿ ನೀರನ್ನು ನಾವು ಸವಿದಿದ್ದೇವೆ. ಮೈಸೂರು ಭಾಗದ ಜನ ಕಾವೇರಿಯನ್ನು ಬಳಸಿ ಬೆಳೆದ ಅನ್ನವನ್ನು ತಿನ್ನುತ್ತಿದ್ದೇವೆ. ನಾವು ಕೊಡುತ್ತಿರುವುದು ದೇಣಿಗೆ, ಕೊಡುಗೆಯಲ್ಲ. ಅವರಿಗೆ ಸಾಂತ್ವನ ಹೇಳುವುದು ನಮ್ಮ ಕರ್ತವ್ಯ ಎಂದರು.
ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ನೆರೆ ಹಾವಳಿಯಿಂದ ತತ್ತರಿಸಿರುವ ಕೊಡಗಿಗೆ ಆದಿಚುಂಚನಗಿರಿ ಪೀಠಾಧಿಪತಿಗಳು ನೂರು ದಿನ ಕೊಡಗಿನಲ್ಲೇ ವಾಸ್ತವ್ಯ ಹೂಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.
ನಾನು ವೈಯಕ್ತಿಕವಾಗಿ ಕೊಡಗಿಗೆ ಪರಿಹಾರ ನೀಡಿದ್ದೇನೆ. ಅದೇ ರೀತಿ ಗೋವಿಂದರಾಜನಗರ, ವಿಜಯನಗರ ಕ್ಷೇತ್ರದ ಜನರು ಕೈಲಾದ ಸಹಾಯ ಮಾಡಿ ಅವರ ನೆರವಿಗೆ ಮುಂದಾಗಿ ಎಂದರು.
ವಿಜಯನಗರ ಶಾಖಾ ಮಠದಿಂದ ಆರಂಭವಾದ ಪಾದಯಾತ್ರೆ ನಗರದ ವಿವಿಧೆಡೆಗಳಿಂದ ಆಗಮಿಸಿ ಆರ್ಪಿಸಿ ಲೇಔಟ್ನ ಬಿಬಿಎಂಪಿ ಪಾರ್ಕ್ ಬಳಿ ಪೂರ್ಣಗೊಂಡಿದೆ. ಪಾದಯಾತ್ರೆಯುದ್ದಕ್ಕೂ ದೇಣಿಗೆಯ ಮಹಾಪೂರವೇ ಹರಿದು ಬಂದಿತು.
ನಮ್ಮವರ ತಂಡದಿಂದ 1 ಕೋಟಿಯನ್ನು ಚೆಕ್ ಮೂಲಕ ನೀಡಲಾಯಿತು. ಶಾಸಕ ಗೋಪಾಲಯ್ಯ 2ಲಕ್ಷರೂ., ಮಾಜಿ ಸಚಿವರಾದ ಎಂ.ಕೃಷ್ಣಪ್ಪ 25ಲಕ್ಷ ರೂ., ವಿ.ಸೋಮಣ್ಣ 20ಲಕ್ಷ ರೂ. ನೀಡಿದ್ದು, ಮಾರುತಿ ಮಂದಿರ ಟ್ರಸ್ಟ್ನಿಂದ 10 ಲಕ್ಷ, ಟೋಲ್ಗೇಟ್ ಬಳಿಯ ಶನಿಮಹಾತ್ಮ ದೇವಾಲಯ ಟ್ರಸ್ಟ್ನಿಂದ 2 ಲಕ್ಷ, ಕೆಪಿಸಿಸಿ ಕಾರ್ಯದರ್ಶಿ ಶ್ರೀನಿವಾಸ್ 1 ಲಕ್ಷ, ಚಿಕ್ಕಬಳ್ಳಾಪುರ ಒಕ್ಕಲಿಗರ ಸಂಘ 1 ಲಕ್ಷ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಂದ 1 ಲಕ್ಷ, ಕೃಷಿ ವಿವಿ ನಿವೃತ್ತ ಉಪಕುಲಪತಿ ನಾರಾಯಣಗೌಡ ಅವರ 2 ತಿಂಗಳ ವೇತನ, ಎಚ್.ಎನ್.ಕೃಷ್ಣಮೂರ್ತಿ 50 ಸಾವಿರ ಸೇರಿದಂತೆ ಕೊಡಗಿಗೆ ನಮ್ಮ ಕೊಡುಗೆ ಪಾದಯಾತ್ರೆಗೆ ಸಾರ್ವಜನಿಕರಿಂದ ಸಾಕಷ್ಟು ಸ್ಪಂದನೆ ದೊರೆಯಿತು. ಆದಿಚುಂಚನಗಿರಿ ಮಠದಿಂದ ಸುಮಾರು 60 ರಿಂದ 70ಲಕ್ಷ ವೆಚ್ಚದಲ್ಲಿ ಕೊಡಗಿನಲ್ಲಿ ಶಾಲೆ ತೆರೆಯಲಾಗುತ್ತಿದೆ.