ಬೆಂಗಳೂರು, ಸೆ.2-ಗಣಪತಿ ಪ್ರತಿಷ್ಠಾಪನೆ ಮಾಡಿ ಆರಾಧಿಸುವÀ ಸಂಘ ಸಂಸ್ಥೆಗಳು, ಭಕ್ತವೃಂದವರು ಈಗ ಅನುಮತಿಗಾಗಿ ವಿವಿಧ ಇಲಾಖೆಗಳಿಗೆ ಅಲೆಯಬೇಕಿಲ್ಲ. ಇದಕ್ಕಾಗಿ ಬಿಬಿಎಂಪಿ ಜಾರಿಗೆ ತಂದಿರುವ ಏಕಗವಾಕ್ಷಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮೇಯರ್ ಸಂಪತ್ರಾಜ್ ಅವರಿಗೆ ಸೂಚನೆ ನೀಡಿದರು.
ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಪಾಲಿಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕಾಗಿ ಬೆಸ್ಕಾಂ ಕಚೇರಿ, ಪೆÇಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಮೂರು ಕಚೇರಿಗಳಿಗೆ ಅಲೆದಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಏಕಗವಾಕ್ಷಿ ಪದ್ಧತಿಯಡಿ ಒಂದೇ ಕಡೆ (ಆಯಾ ಜಂಟಿ ಆಯುಕ್ತರ ಕಚೇರಿ)ಯಲ್ಲಿ ಅನುಮತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಲ್ಲದೆ, ಗಣೇಶನ ಪ್ರತಿಷ್ಠಾಪನೆಗೆ ನಿಗದಿಪಡಿಸಲಾಗಿದ್ದ ನೆಲಬಾಡಿಗೆಯನ್ನೂ ಕೂಡ ರದ್ದು ಮಾಡಲಾಗಿದೆ. ಭಕ್ತರು ನಿರಾಂತಕವಾಗಿ ವಲಯ, ಜಂಟಿ ಆಯುಕ್ತರ ಕಚೇರಿಗೆ ತೆರಳಿ ಅನುಮತಿ ಪಡೆದು ನಿಯಮಾನುಸಾರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಹುದಾಗಿದೆ.
ಈ ಕುರಿತು ಕಳೆದ ಮಂಗಳವಾರ ಬಿಬಿಎಂಪಿ ಸಭೆಯಲ್ಲೂ ಕೂಡ ಚರ್ಚಿಸಿ ನಿರ್ಣಯಗೊಳ್ಳಲಾಯಿತು. ಪ್ರತಿ ಚದರ ಮೀಟರ್ಗೆ ನೆಲ ಬಾಡಿಗೆ ಪಡೆಯಲಾಗುತ್ತಿತ್ತು. ಇದನ್ನು ರದ್ದುಪಡಿಸಬೇಕೆಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದರಲ್ಲದೆ, ಏಕಗವಾಕ್ಷಿ ಪದ್ಧತಿ ಜಾರಿಗೆ ಒತ್ತಾಯಿಸಿದ್ದರು.
ಶಾಸಕ ಮುನಿರತ್ನ ಮಾತನಾಡಿ, ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸುವವರಿಗೆ ಮಾತ್ರ ಅನುಮತಿ ನೀಡಬೇಕು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಎಲ್ಲ ಸಾಧಕ-ಬಾಧಕಗಳನ್ನು ಚರ್ಚಿಸಿರುವ ಬಿಬಿಎಂಪಿ ಏಕಗವಾಕ್ಷಿ ಪದ್ಧತಿಯಡಿ ಅನುಮತಿಗೆ ಅವಕಾಶ ಕಲ್ಪಿಸಿದ್ದು, ಗಣಪತಿ ಮೂರ್ತಿ ಪ್ರತಿಷ್ಠಾಪಿಸುವವರು ಇಲ್ಲಿ ಅನುಮತಿ ಪಡೆದು ನಿಯಮಾವಳಿ ಪ್ರಕಾರ ಗಣಪತಿ ಪ್ರತಿಷ್ಠಾಪನೆ ಮಾಡಬಹುದಾಗಿದೆ.