ಭುವನೇಶ್ವರ: ತೃತೀಯಲಿಂಗಿಯಾಗಿ ಜನಿಸಿದ ಮಾತ್ರಕ್ಕೆ ಸಮಾಜದಿಂದ ನಿರಂತರವಾಗಿ ಅಸಮಾನತೆ, ದೌರ್ಜನ್ಯಕ್ಕೆ ಒಳಗಾಗಿರುವ ವರ್ಗವು ಸಾಮಾನ್ಯವಾಗಿ ಬೀದಿ ಬೀದಿಗಳಲ್ಲಿ ಹಣ ವಸೂಲಿ ಮಾಡುತ್ತಲೇ ಜೀವನ ಸವೆಸುತ್ತಿದೆ. ಆದರೆ ಇದೆಲ್ಲವನ್ನೂ ಮೆಟ್ಟಿನಿಂತು ಸಮಾಜದ ಎದುರು ತಲೆಎತ್ತಿ ನಿಲ್ಲುವ ತೃತೀಯಲಿಂಗಿಗಳ ಸಂಖ್ಯೆ ತೀರಾ ಕಡಿಮೆ. ಇದು ಸ್ವಾಭಿಮಾನದಿಂದ ಬದುಕುತ್ತಿರುವ ತೃತೀಯಲಿಂಗಿಯೊಬ್ಬರ ಸಾಧನೆಯ ಹಾದಿ…
ಭುವನೇಶ್ವದ ಮೇಘನಾ ಸಾಹೂ ಎಂಬ ತೃತೀಯ ಲಿಂಗಿ ಓಲಾ ಕ್ಯಾಬ್ ಡ್ರೈವರ್ ಆಗಿ ಸ್ವಾಭಿಮಾನದಿಂದ ಜೀವನ ಮಾಡುತ್ತಿದ್ದಾರೆ. ಅಂದಹಾಗೆ ಈಕೆ ಅವಿದ್ಯಾವಂತೆ ಏನೂ ಅಲ್ಲ. ವಿದ್ಯಾರ್ಹತೆಯಲ್ಲಿ ಇವರು ಎಂಬಿಎ ಪದವೀಧರೆ. ಆದರೆ ಸಮಾಜವು ಇನ್ನೂ ಈ ವರ್ಗವನ್ನು ಅಸಮಾನವಾಗಿಯೇ ಕಾಣುತ್ತಿರುವ ಕಾರಣ ಅನಿವಾರ್ಯವಾಗಿ ಕ್ಯಾಬ್ ಡ್ರೈವಿಂಗ್ ಮಾಡುತ್ತಿದ್ದಾರೆ. ಯಾರ ಬಳಿಯೂ ಕೈಚಾಚದೇ ಸ್ವಂತ ದುಡಿದು ಬದುಕುತ್ತಿರುವೆನೆಂಬ ಹೆಮ್ಮೆ ಇವರಿಗಿದೆ.
ಮೊದಲ ತೃತೀಯ ಲಿಂಗಿ ಕ್ಯಾಬ್ ಡ್ರೈವರ್ ಎಂದು ಇವರನ್ನು ಗುರುತಿಸಿ ಪ್ರಶಂಸಿಸಲಾಗುತ್ತಿದ್ದರೂ, ಈ ವರ್ಗದ ಮೇಲೆ ನಡೆಯುತ್ತಿರುವ ಶೋಷಣೆಯ ಬಗ್ಗೆ ಇವರಿಗೆ ಅಸಮಾಧಾನವಿದೆ. ಲಿಂಗ ಗುರುತಿನಿಂದಾಗಿ ಕೆಲಸ ಕೊಡಲು ಜನರು ಹಿಂಜರಿಯುತ್ತಾರೆ ಎಂಬುದು ಇವರ ಅಳಲು. ಡ್ರೈವರ್ ಆಗಿ ಕೆಲಸ ಪಡೆಯಬೇಕಾದರೂ ತರಬೇತಿ ಹಾಗೂ ಲೈಸನ್ಸ್ಗಾಗಿ ಸಾಕಷ್ಟು ಒದ್ದಾಡಿದೆ ಎಂದಿದ್ದಾರೆ.
ತಾನು ಮಾಡುತ್ತಿರುವ ಕೆಲಸದಲ್ಲಿ ಹೆಮ್ಮೆ, ತೃಪ್ತಿ ಇದೆ ಎನ್ನುವ ಇವರು, ಪ್ರಯಾಣಿಕರಿಂದ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಸ್ವಾವಲಂಬಿ ಜೀವನ ನಡೆಸಲು ಇತರೆ ತೃತೀಯ ಲಿಂಗಿಗಳೂ ಸಹ ಸ್ವಯಂಉದ್ಯೋಗದತ್ತ ಮುಖ ಮಾಡಬೇಕೆಂದು ಸಲಹೆ ನೀಡಿದ್ದಾರೆ.