ಬೆಂಗಳೂರು, ಸೆ.1- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಜನತಾದರ್ಶನ ಇಂದಿನಿಂದ ಮತ್ತೆ ಆರಂಭಗೊಂಡಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಆರಂಭಗೊಂಡ ಜನತಾದರ್ಶನದಲ್ಲಿ ಪಾಲ್ಗೊಳ್ಳಲು ಜನರ ದಂಡೇ ನೆರೆದಿತ್ತು.
ಕೃಷ್ಣಾ ಕಚೇರಿಯ ಆವರಣ ಹಾಗೂ ಹೊರಭಾಗದಲ್ಲೂ ಸರತಿ ಸಾಲಿನಲ್ಲಿ ನಿಂತು ಜನ ದೊರೆಗೆ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು.
ಜನತಾ ದರ್ಶನದಲ್ಲಿ ಹಲವರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೆಂಡಾಲ್ ಹಾಕಿ ಆಸನಗಳ ವ್ಯವಸ್ಥೆ ಮಾಡಿ, ಅಧಿಕಾರಿಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ವಿಶೇಷಚೇತನರಿಗೆ ಪ್ರತ್ಯೇಕ ಕೌಂಟರ್ ತೆರೆದು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು.
ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಿದ್ದರಿಂದ ಪೆÇಲೀಸರ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ವಿಶೇಷಚೇತನರಿಗಾಗಿ ವಿಶೇಷ ವ್ಯವಸ್ಥೆ ಮಾಡಿ ಅವರಿರುವ ಜಾಗದಲ್ಲೇ ಮುಖ್ಯಮಂತ್ರಿಗಳು ಹೋಗಿ ಸಮಸ್ಯೆ ಆಲಿಸುವಂತಹ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಳಿದವರು ಸರತಿ ಸಾಲಿನಲ್ಲಿ ಬಂದು ಸಿಎಂ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದಾಗಿತ್ತು.
ಮಾನವೀಯತೆ ಮೆರೆದ ಕಾನ್ಸ್ಟೆಬಲ್:
ಜನತಾದರ್ಶನಕ್ಕೆ ಆಗಮಿಸಿದ ವಿಶೇಷಚೇತನರೊಬ್ಬರು ನಡೆಯಲೂ ಆಗದೆ ಸಿಎಂ ಭೇಟಿಗೆ ಕಾತರಿಸುತ್ತಿದ್ದಾಗ, ಆತನನ್ನು ಗೇಟ್ ಬಳಿಯಿಂದಲೇ ಎತ್ತಿಕೊಂಡು ಅವರಿಗಾಗಿ ನಿರ್ಮಿಸಿದ್ದ ವಿಶೇಷ ಸ್ಥಳದಲ್ಲಿ ತಂದು ಕೂರಿಸಿದವರು ಕಾನ್ಸ್ಟೆಬಲ್ ಬಾಲಾಜಿ. ಚನ್ನಪಟ್ಟಣದಿಂದ ಜನತಾದರ್ಶನಕ್ಕಾಗಿ ಬಂದಿದ್ದ ಯೂಸುಫ್ ಶಬೀರ್ನನ್ನು ಮಗುವಿನಂತೆ ಎತ್ತಿಕೊಂಡು ಬಂದ ಕಾನ್ಸ್ಟೆಬಲ್ ಬಾಲಾಜಿ, ಶಬೀರ್ ಸಿಎಂ ಭೇಟಿಗೆ ನೆರವಾದರು.
ಉದ್ಯೋಗ, ಆರೋಗ್ಯ ಸಮಸ್ಯೆ, ಪೆÇಲೀಸ್ ಕಿರುಕುಳ, ಆಸ್ತಿ ಸಮಸ್ಯೆ, ನಿವೇಶನ ಕೋರಿಕೆ, ಮನೆಗಾಗಿ ಮನವಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ಅಲ್ಲದೆ ಪೆÇಲೀಸ್, ಸಮಾಜ ಕಲ್ಯಾಣ, ಆರೋಗ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಿದರು.
ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ:
ಯಾವುದೇ ಕಾರಣಕ್ಕೂ ರಾಜ್ಯದ ಯಾವುದೇ ಭಾಗದಲ್ಲಿ ಜನರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಅಭಯ ನೀಡಿದರು.
ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದ ಯಾವುದೇ ಭಾಗದಲ್ಲೂ ಜನರನ್ನು ಒಕ್ಕಲೆಬ್ಬಿಸುವುದಿಲ್ಲ. ಸರ್ಕಾರದ ಸೌಲಭ್ಯಗಳನ್ನು ಆ ಜನರಿಗೆ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ನೂರು ದಿನಗಳು ಪೂರ್ಣಗೊಳಿಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದ ಅವರು, ಪ್ರತಿ ದಿನವೂ ನಾಡಿನ ಜನರ ಕಷ್ಟವನ್ನು ಕೇಳಿ ಅವರ ನೋವಿಗೆ ಸ್ಪಂದಿಸಿದ್ದೇನೆ ಎಂದರು.
ಗ್ರಾಮ ವಾಸ್ತವ್ಯ ಮಾಡಲು ವೈದ್ಯರು ಅನುಮತಿ ನೀಡಿಲ್ಲ. ಇಂದಿನಿಂದ ವಾರದಲ್ಲಿ ಒಂದು ದಿನ ಜನತಾದರ್ಶನವನ್ನು ನಡೆಸಲಾಗುವುದು. ವಾರದಲ್ಲಿ ನಾಲ್ಕು ದಿನ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು. ತಿಂಗಳಲ್ಲಿ ಒಂದು ದಿನ ಜಿಲ್ಲಾಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು-ಕೊರತೆ ಆಲಿಸುವುದಷ್ಟೇ ಅಲ್ಲ ಅಧಿಕಾರಿಗಳ ಸಭೆಯನ್ನೂ ಕೂಡ ನಡೆಸಲಾಗುವುದು ಎಂದರು.
ಬೆಂಗಳೂರಿನಲ್ಲಿದ್ದಾಗ ಪ್ರತಿ ಶನಿವಾರ ಜನತಾ ದರ್ಶನವನ್ನು ನಡೆಸಿ ಖುದ್ದು ಜನರ ಸಂಕಷ್ಟಗಳನ್ನು ಆಲಿಸಲಾಗುವುದು. ತಡರಾತ್ರಿಯವರೆಗೂ ಜನತಾದರ್ಶನವನ್ನು ನಡೆಸಲಾಗುವುದು ಎಂದು ತಿಳಿಸಿದರು.
ತಿಂಗಳಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳು ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಜನರ ಕಷ್ಟ ತಿಳಿಯಲು ಜನಸಂಪರ್ಕ ಸಭೆಗಳನ್ನು ನಡೆಸುವಂತೆ ಸೂಚಿಸಲಾಗಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ಪ್ರವಾಸ:
ಸೆ.10ರಿಂದ 15ರವರೆಗೆ ಉತ್ತರ ಕರ್ನಾಟಕದಲ್ಲಿ ಐದು ದಿನಗಳ ಕಾಲ ಪ್ರವಾಸ ಕೈಗೊಳ್ಳಲು ಉದ್ದೇಶಿಸಲಾಗಿದೆ. ಯಾವ ರೂಪದ ಪ್ರವಾಸ ಕಾರ್ಯಕ್ರಮ ಎಂಬುದನ್ನು ಇನ್ನೆರೆಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದರು.