ಕಾಂಗ್ರೆಸ್‍ನಲ್ಲಿ ಮತ್ತೊಮ್ಮೆ ಅಸಮಾಧಾನದ ಕರಿಛಾಯೆ

ಬೆಂಗಳೂರು, ಸೆ.1- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಮಹತ್ವದ ಸಭೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು ಹಾಜರಾಗುವ ಮೂಲಕ ಕಾಂಗ್ರೆಸ್‍ನಲ್ಲಿ ಮತ್ತೊಮ್ಮೆ ಅಸಮಾಧಾನದ ಕರಿಛಾಯೆ ಕಾಣಿಸತೊಡಗಿದೆ.
ಲೋಕಸಭೆ ಚುನಾವಣೆ, ಪಕ್ಷದ ಸಂಘಟನೆ, ಪುನರ್ ರಚನೆ, ಹಲವಾರು ಪ್ರಮುಖ ಉದ್ದೇಶಗಳ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಜಿಲ್ಲಾವಾರು ಸಭೆಗಳನ್ನು ಇಂದು ಮತ್ತು ನಾಳೆ ಕರೆದಿದ್ದಾರೆ.
ಪ್ರತಿ ತಿಂಗಳು ಮೂರು ದಿನ ವೇಣುಗೋಪಾಲ್ ಪ್ರತಿಯೊಂದು ಜಿಲ್ಲೆಗಳ ಮುಖಂಡರ ಜತೆ ಸಭೆ ನಡೆಸಿ ಪಕ್ಷದ ಸಂಘಟನೆ ಚುರುಕುಗೊಳಿಸುವ ಮತ್ತು ಭಿನ್ನಾಭಿಪ್ರಾಯಗಳನ್ನು ತಿಳಿಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಅದರಂತೆ ಕಳೆದ ತಿಂಗಳು ಮಧ್ಯ ಭಾಗದಲ್ಲಿ ಸಭೆ ಕರೆಯಲಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೆಹಲಿ ಪ್ರವಾಸ ನಿಗದಿಯಾದ ಹಿನ್ನೆಲೆಯಲ್ಲಿ ಒಂದು ದಿನ ಮಾತ್ರ ಸಭೆ ನಡೆದು ಉಳಿದ ಎರಡು ದಿನದ ಸಭೆಯನ್ನು ಮುಂದೂಡಲಾಗಿತ್ತು. ಅದನ್ನು ಇಂದು ಮತ್ತು ನಾಳೆ ನಡೆಸುವುದಾಗಿ ಒಂದು ವಾರದ ಹಿಂದೆಯೇ ದಿನಾಂಕ ನಿಗದಿಯಾಗಿತ್ತು.
ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರೆ ಅವರ ಘನತೆ ಹೆಚ್ಚಾಗುತ್ತಿತ್ತು. ಆದರೆ, ಪರಮೇಶ್ವರ್ ಸಭೆಯಿಂದ ದೂರ ಉಳಿದಿದ್ದಾರೆ.
ತಮ್ಮ ಒಡೆತನದ ಸಿದ್ಧಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಕಾಲೇಜಿನಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳ ತರಗತಿ ಆರಂಭಕ್ಕೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಪರಮೇಶ್ವರ್ ತೆರಳಿದ್ದಾರೆ.

ಇತ್ತೀಚೆಗೆ ನಡೆದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾದ ದಿನೇಶ್‍ಗುಂಡೂರಾವ್ ಅವರು ಪಕ್ಷವನ್ನು ಸಮಗ್ರವಾಗಿ ಬದಲಾವಣೆ ಮಾಡುವ ಅಗತ್ಯವಿದೆ. ನಿಷ್ಕ್ರಿಯವಾಗಿರುವ ಕಾಂಗ್ರೆಸ್ ಬ್ಲಾಕ್ ಮತ್ತು ಜಿಲ್ಲಾ ಸಮಿತಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡಲಾಗುವುದು ಎಂದು ಹೇಳಿದ್ದರು.
ಈ ಹಿಂದಿನ ಸಮಿತಿಗಳಲ್ಲಿ ಸ್ಥಾನ ಪಡೆದಿರುವವರು ಬಹುತೇಕ ಪರಮೇಶ್ವರ್ ಅವರ ಬೆಂಬಲಿಗರಾಗಿದ್ದಾರೆ. ದಿನೇಶ್‍ಗುಂಡೂರಾವ್ ಬಹುತೇಕ ಸಮಿತಿಗಳನ್ನು ಪುನಾರಚಿಸಿ ಹೊಸದಾಗಿ ಪಕ್ಷ ಕಟ್ಟುವ ಪ್ರಯತ್ನಕ್ಕೆ ಕೈ ಹಾಕಿರುವುದರಿಂದ ಪರಮೇಶ್ವರ್ ಸಭೆಯಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ.
ಜತೆಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ. ಪರಮೇಶ್ವರ್ ತುಮಕೂರು ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಲೋಕಸಭಾ ಚುನಾವಣೆ ಬಗ್ಗೆ ಅಷ್ಟೇನೂ ಆಸಕ್ತಿ ವಹಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಪರಮೇಶ್ವರ್ ಸಭೆಯನ್ನು ಬಿಟ್ಟು ತಮ್ಮ ಖಾಸಗಿ ಕಾಲೇಜಿನ ಕಾರ್ಯಕ್ರಮದತ್ತ ಗಮನ ಹರಿಸಿದ್ದಾರೆ.

ಇನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿದೆ. ಆದರೆ, ಎರಡು ದಿನಗಳ ಸಭೆಯಲ್ಲಿ ಭಾಗವಹಿಸುತ್ತಾರೋ ಅಥವಾ ರಾಮನಗರ ಜಿಲ್ಲೆಗೆ ಸಂಬಂಧಪಟ್ಟ ಸಭೆಯಲ್ಲಿ ಮಾತ್ರ ಭಾಗವಹಿಸುತ್ತಾರೋ ಎಂಬುದು ಕುತೂಹಲ ಕೆರಳಿದೆ.
ಉಳಿದಂತೆ ಎಲ್ಲಾ ಸಚಿವರು ಅವರವರ ಉಸ್ತುವಾರಿ ಮತ್ತು ತವರು ಜಿಲ್ಲೆಗಳ ಸಭೆಗಳು ಬಂದಾಗ ಭಾಗವಹಿಸುತ್ತಾರೆ.
ಈ ಹಿಂದೆ ನಡೆಯುತ್ತಿದ್ದ ಸಭೆಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತಪ್ಪದೇ ಭಾಗವಹಿಸುತ್ತಿದ್ದರು. ಸರ್ಕಾರ ಬದಲಾದ ನಂತರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪಕ್ಷದ ಸಭೆಗಳಿಂದ ದೂರ ಉಳಿಯುತ್ತಿದ್ದಾರೆ. 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಇತ್ತೀಚೆಗೆ ಪಕ್ಷ ಸಂಘಟನೆ ಬಗ್ಗೆ ತೋರಿಸುತ್ತಿರುವ ನಿರಾಸಕ್ತಿ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಮೇಲ್ನೋಟಕ್ಕೆ ಎಲ್ಲವೂ ಸರಿಯಿದ್ದಂತೆ ಕಂಡರೂ ಆಂತರಿಕವಾಗಿ ಪರಮೇಶ್ವರ್ ಮತ್ತು ದಿನೇಶ್‍ಗುಂಡೂರಾವ್ ಬಣಗಳ ನಡುವೆ ಶೀತಲಸಮರ ನಡೆಯುತ್ತಲೇ ಇದೆ.
ಜಿಲ್ಲಾವಾರು ಸಮಿತಿಗಳು ಮತ್ತು ಅಧ್ಯಕ್ಷರ ಬದಲಾವಣೆಗೆ ಕೈ ಹಾಕಿದ ನಂತರ ಅಸಮಾಧಾನ ಇನ್ನೂ ಹೆಚ್ಚಾಗಿದೆ. ಇಂದು ಆರಂಭವಾದ ಕೆಪಿಸಿಸಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಅವರುಗಳು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ