ನವದೆಹಲಿ (ಪಿಟಿಐ), ಆ.31-ಸಾರ್ವಜನಿಕ ಜಾಹೀರಾತು ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪಗಳ ಮೇಲೆ ಸುಪ್ರೀಂಕೋರ್ಟ್ ಇಂದು ಕೇಂದ್ರ ಸರ್ಕಾರ, ಆರು ರಾಜ್ಯಗಳು ಹಾಗೂ ಬಿಜೆಪಿಗೆ ನೋಟಿಸ್ಗಳನ್ನು ಜಾರಿಗೊಳಿಸಿದ್ದು, ಪ್ರತ್ಯುತ್ತರಕ್ಕೆ ಸೂಚಿಸಿದೆ.
ಆಮ್ ಆದ್ಮಿ ಪಾರ್ಟಿ(ಎಎಪಿ) ಶಾಸಕ ಸಂಜೀವ್ ಝಾ ಅವರು ಈ ಸಂಬಂಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜನ್ ಗೊಗೈ ನೇತೃತ್ವದ ಪೀಠವು ಈ ನೋಟಿಸ್ಗಳನ್ನು ಜಾರಿಗೊಳಿಸಿ ನಾಲ್ಕು ವಾರಗಳ ಒಳಗೆ ಪ್ರತ್ಯುತ್ತರಗಳನ್ನು ನೀಡುವಂತೆ ನಿರ್ದೇಶನ ನೀಡಿದೆ.
ಕೇಂದ್ರ ಮತ್ತು ಬಿಜೆಪಿ ಅಲ್ಲದೇ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಜಾರ್ಖಂಡ್, ಛತ್ತೀಸ್ಗಢ ಹಾಗೂ ತೆಲಂಗಾಣ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್ಗಳನ್ನು ಜಾರಿಗೊಳಿಸಿದೆ. ತೆಲಂಗಾಣ ಹೊರತುಪಡಿಸಿ ಉಳಿದ ಐದು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ.
ಸಾರ್ವಜನಿಕ ಜಾಹೀರಾತು ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಸ್ಪಷ್ಟ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.