ಟಾಟಾಏಸ್ ವಾಹನವನ್ನು ಪಾರ್ಕಿಂಗ್ ಮಾಡುವ ವಿಚಾರವಾಗಿ ಚಾಲಕ ಹಾಗೂ ಮೂವರ ನಡುವೆ ನಡೆದ ಜಗಳ ಚಾಲಕನ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಆ.31- ಟಾಟಾಏಸ್ ವಾಹನವನ್ನು ಪಾರ್ಕಿಂಗ್ ಮಾಡುವ ವಿಚಾರವಾಗಿ ಚಾಲಕ ಹಾಗೂ ಮೂವರ ನಡುವೆ ನಡೆದ ಜಗಳ ಚಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಜಾಜಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕಾಶನಗರದ ನಿವಾಸಿ, ಟಾಟಾಏಸ್ ವಾಹನದ ಚಾಲಕ ಶ್ರೀರಾಮ್ (63) ಕೊಲೆಯಾದ ದುರ್ದೈವಿ.
ಘಟನೆಗೆ ಸಂಬಂಧಿಸಿದಂತೆ ಕಾರ್ತಿಕ್, ಜನಾರ್ದನ್ ಮತ್ತು ರಾಜಶೇಖರ್‍ನನ್ನು ಬಂಧಿಸಲಾಗಿದೆ.
ಮಾಲೀಕ ಸುರೇಶ್‍ಬಾಬು ಎಂಬುವವರು ಮೂರು-ನಾಲ್ಕು ಟಾಟಾಏಸ್ ವಾಹನಗಳನ್ನಿಟ್ಟುಕೊಂಡಿದ್ದು, ಇವರ ಬಳಿ ಶ್ರೀರಾಮ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಎಂದಿನಂತೆ ಶ್ರೀರಾಮ್ ನಿನ್ನೆ ಬೆಳಗ್ಗೆ ಟಾಟಾಏಸ್ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದು, ರಾತ್ರಿ 8.45ರ ಸುಮಾರಿಗೆ ವಾಪಸ್ ಬಂದಿದ್ದಾರೆ.
ಪ್ರತಿನಿತ್ಯ ಟಾಟಾಏಸ್ ವಾಹನವನ್ನು ರಾಜ್‍ಕುಮಾರ್ ರಸ್ತೆಯ ಪಾಪ್ಯುಲರ್ ಟೈಯರ್ ಅಂಗಡಿ ಸಮೀಪದ ನವರಸ ಬಾರ್ ಬಳಿಯ ರಸ್ತೆ ಬದಿ ನಿಲ್ಲಿಸುತ್ತಿದ್ದರು.
ಅದರಂತೆ ರಾತ್ರಿ ಈ ಸ್ಥಳಕ್ಕೆ ಬಂದಾಗ ಪಾರ್ಕಿಂಗ್ ಮಾಡುವ ಜಾಗದಲ್ಲಿ ನಿಂತಿದ್ದ ಕಾರ್ತಿಕ್, ಜನಾರ್ದನ್, ರಾಜಶೇಖರ್‍ಗೆ ಜಾಗ ಬಿಡಲು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶ್ರೀರಾಮ್ ಹಾಗೂ ಮೂವರ ನಡುವೆ ಜಗಳವಾಗಿದೆ. ಕಾರ್ತಿಕ್ ಎಂಬಾತ ಚಾಲಕ ಶ್ರೀರಾಮ್‍ಗೆ ಕೈನಿಂದ ಹೊಡೆದಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಶ್ರೀರಾಮ್ ಸ್ಪ್ಯಾನರ್‍ನಿಂದ ಕಾರ್ತಿಕ್ ತಲೆಗೆ ಹೊಡೆದಿದ್ದಾರೆ.
ಈ ವೇಳೆ ಕಾರ್ತಿಕ್‍ಗೆ ರಕ್ತಗಾಯವಾಗಿದೆ. ಇದರಿಂದ ಜಗಳ ಮತ್ತಷ್ಟು ವಿಕೋಪಕ್ಕೆ ತಿರುಗಿ ಶ್ರೀರಾಮ್ ಮೇಲೆ ಮೂವರೂ ಸ್ನೇಹಿತರು ಸೇರಿ ಮನಬಂದಂತೆ ಹಲ್ಲೆ ನಡೆಸಿ ತಲೆಯನ್ನು ಗೋಡೆಗೆ ಗುದ್ದಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಂಭೀರ ಗಾಯಗೊಂಡು ಕುಸಿದುಬಿದ್ದಿದ್ದ ಶ್ರೀರಾಮ್‍ನನ್ನು ಸಾರ್ವಜನಿಕರು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ರಾಜಾಜಿನಗರ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಸ್ಥಳೀಯರಿಂದ ಮಾಹಿತಿ ಕಲೆ ಹಾಕಿ ಮೂವರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ