ಕಠ್ಮಂಡು (ಪಿಟಿಐ), ಆ.31-ಹಿಮಾಲಯ ರಾಷ್ಟ್ರ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ನಡೆಯುತ್ತಿರುವ ¾¾ಬಹು ವಿಭಾಗೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ(ಬೇ ಆಫ್ ಬೆಂಗಾಳ್ ಇನಿಷಿಯೇಟಿವ್ ಫಾರ್ ಮಲ್ಟಿ ಸೆಕ್ಟೊರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋಆಪರೇಷನ್-ಬಿಮ್ಸ್ಟೆಕ್) ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲವು ನಾಯಕರೊಂದಿಗೆ ಫಲಪ್ರದ ಚರ್ಚೆ ನಡೆಸಿದ್ದಾರೆ.
ಬಂಗಾಳಕೊಲ್ಲಿ ಸಮುದ್ರ ತೀರದ ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಥೈಲೆಂಡ್, ಭೂತಾನ್ ಮತ್ತು ಮ್ಯಾನ್ಮಾರ್ ದೇಶಗಳ ಒಕ್ಕೂಟದ ಬಿಮ್ಸ್ಟೆಕ್ ಸಮಾವೇಶದ ಸಂದರ್ಭದಲ್ಲಿ ಮೋದಿ ಥಾಯ್ಲೆಂಡ್ ಪ್ರಧಾನಮಂತ್ರಿ ಪ್ರಯುಥ್ ಚಾನ್-ಒಚಾ ಹಾಗೂ ಮ್ಯಾನ್ಮಾರ್ ಅಧ್ಯಕ್ಷ ವಿನ್ ಮಿಯಿಂಟ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ಉಭಯ ಕುಶಲೋಪರಿ ನಂತರ ದ್ವಿಪಕ್ಷೀಯ ಚರ್ಚೆ ನಡೆಸಿದ ಉಭಯ ನಾಯಕರು, ಪರಸ್ಪರ ಸಹಕಾರ ಬಲವರ್ಧನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಭಾರತ ಮತ್ತು ಥಾಯ್ಲೆಂಡ್ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆ ಇವರು ಸಮಾಲೋಚನೆ ನಡೆಸಿದ್ದಾರೆ ಎಂದು ಪ್ರಧಾನಮಂತ್ರಿ ಅವರ ಕಚೇರಿ ಟ್ವೀಟ್ ಮಾಡಿದೆ.
ಥಾಯ್ ಪ್ರಧಾನಿ ಬೇಟಿ ನಂತರ ಮ್ಯಾನ್ಮಾರ್ ಅಧ್ಯಕ್ಷ ವಿನ್ ಮಿಯಿಂಟ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಧರ್ಮಶಾಲೆ ಹಸ್ತಾಂತರ: ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಹಲವು ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕಠ್ಮಂಡುವಿನ ವಿಶ್ವವಿಖ್ಯಾತ ಪಶುಪತಿನಾಥ ದೇವಾಲಯದ ಆವರಣದಲ್ಲಿ ಭಾರತೀಯ ನೆರವಿನೊಂದಿಗೆ ನಿರ್ಮಿಸಲಾಗಿರುವ ಧರ್ಮಶಾಲಾ ವಿಶ್ರಾಂತಿ ಗೃಹವನ್ನು ಮೋದಿ, ನೇಪಾಳದ ಪ್ರಧಾನಮಂತ್ರಿ ಕೆ.ಪಿ. ಒಲಿ ಅವರಿಗೆ ಹಸ್ತಾಂತರಿಸಿದರು.
2001ರಲ್ಲಿ ಈ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಇದಕ್ಕಾಗಿ ಭಾರತ ಸರ್ಕಾರ 22 ಕೋಟಿ ರೂ.ಗಳನ್ನು ನೇಪಾಳಕ್ಕೆ ಕೊಡುಗೆಯಾಗಿ ನೀಡಿತ್ತು. ಈ ಧರ್ಮಶಾಲಾ ಪಂಚತಾರಾ ಹೋಟೆಲ್ಗಳಂಥ ಸಕಲ ಸೌಲಭ್ಯಗಳೊಂದಿಗೆ ಭವ್ಯ ಕಟ್ಟಡ ಹೊಂದಿದ್ದು, ಒಟ್ಟು 82 ಕೊಠಡಿಗಳಿವೆ. ಇಲ್ಲಿ ಒಮ್ಮೆಗೆ 400 ಯಾತ್ರಿಕರು ವಾಸ್ತವ್ಯ ಹೂಡುವ ವ್ಯವಸ್ಥೆ ಇದೆ.