
ಮಂಗಳೂರು,ಆ.31- ಗಡಿನಾಡು ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕವನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟದ ಕಾವು ಏರತೊಡಗಿದ್ದು, ಇದೀಗ ಕೇರಳ ಮುಖ್ಯಮಂತ್ರಿ, ಕೇರಳ ಲೋಕಸೇವಾ ಆಯೋಗಕ್ಕೆ ಸಾಮೂಹಿಕ ಇ-ಮೇಲ್ ಅಭಿಯಾನ ಪ್ರಾರಂಭಿಸಲಾಗಿದೆ.
ಕಾಸರಗೋಡಿನ ಮಂಗಲ್ಪಾಡಿ ಶಾಲೆಗೆ ಮಲಯಾಳಿ ಶಿಕ್ಷಕರು ನೇಮಕಗೊಂಡ ಬಳಿಕ ಗಡಿನಾಡ ಕನ್ನಡಿಗರ ಹೋರಾಟ ಆರಂಭವಾಗಿತ್ತು. ಬುಧವಾರ ಮತ್ತೆ ಅದೇ ಶಿಕ್ಷಕ ಶಾಲೆಯಲ್ಲಿ ಕನ್ನಡ ಮಾಧ್ಯಮ ತರಗತಿಗೆ ಹಾಜರಾಗಲು ಬಂದಾಗ ಮತ್ತೆ ಪ್ರತಿಭಟನೆ ನಡೆಸಿ ಅವರನ್ನು 120 ದಿನಗಳ ಕಾಲ ರಜೆಯಲ್ಲಿ ಕಳುಹಿಸಲಾಗಿತ್ತು. ಇದೀಗ ಇ-ಮೇಲ್ ಮೂಲಕ ಸರ್ಕಾರದ ಕದ ತಟ್ಟುವ ಕೆಲಸವಾಗುತ್ತಿದೆ. ಇದಕ್ಕೆ ದ.ಕ.ಜಿಲ್ಲೆಯ ನಾಗರಿಕರೂ ಕೈ ಜೋಡಿಸಿದ್ದಾರೆ.
ಕಾಸರಗೋಡು ಕನ್ನಡ ಹೋರಾಟ ಸಮಿತಿ ನೇತೃತ್ವದ ನಿಯೋಗ ಕೇರಳ ಲೋಕಸೇವಾ ಆಯೋಗದ ಅಧ್ಯಕ್ಷರಾದ ಎಂ.ಕೆ.ಸಕೀರ್ ಅವರನ್ನು ಭೇಟಿ ಮಾಡಿದೆ.
ಈಗಾಗಲೇ ಹಳೆಯ ನಿಯಮದಂತೆ ನೇಮಕ ಮಾಡಲಾಗಿದ್ದು, ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.