ಶಿವಮೊಗ್ಗ, ಆ.31-ಕಾಂಗ್ರೆಸ್-ಜೆಡಿಎಸ್ನ್ನು ತಿರಸ್ಕರಿಸಿರುವ ರಾಜ್ಯದ ಜನತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನ 104 ಸ್ಥಾನಗಳನ್ನು ನೀಡಿ ಕಾಂಗ್ರೆಸ್-ಜೆಡಿಎಸ್ನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಜೆಡಿಎಸ್ನ್ನು ಬೆಂಬಲಿಸಿದೆ. ಈ ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಿಗೆ ಒಲವಿಲ್ಲ. ಹಾಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನ ಬಿಜೆಪಿ ಕೈ ಹಿಡಿಯಲಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ 100 ದಿನದ ಅಂತರದಲ್ಲಿ ಎರಡನೇ ಸಮನ್ವಯ ಸಮಿತಿ ಸಭೆ ನಡೆಸುತ್ತಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರಸ್ಪರ ಮುಖ ನೋಡುತ್ತಿಲ್ಲ. ಜೆಡಿಎಸ್ ಅಧ್ಯಕ್ಷರಾದ ವಿಶ್ವನಾಥ್ ತಮ್ಮನ್ನು ಸಮನ್ವಯ ಸಮಿತಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಬಹಿರಂಗ ಹೇಳಿಕೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ದಿನೇಶ್ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಬ್ಬರಲ್ಲೂ ಸಮನ್ವಯ ಇಲ್ಲದ ಸಮಿತಿ ಇದಾಗಿದೆ. ಇಬ್ಬರಿಗೂ ಬೇಡವಾದ ಕೂಸು ಇದು. ಅವರವರ ಆಂತರಿಕ ಕಚ್ಚಾಟದಿಂದಲೇ ಸರ್ಕಾರ ಪತನವಾಗುತ್ತದೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.