ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಪ್ರತಿಪಕ್ಷ ಬಿಜೆಪಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಅತೃಪ್ತ ಶಾಸಕರಿಗೆ ಗಾಳ ಹಾಕುವ ಮೂಲಕ ರಾಜಕೀಯ ಲಾಭ ಪಡೆಯಲು ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿದೆ

 

ಬೆಂಗಳೂರು, ಆ.31-ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಪ್ರತಿಪಕ್ಷ ಬಿಜೆಪಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಅತೃಪ್ತ ಶಾಸಕರಿಗೆ ಗಾಳ ಹಾಕುವ ಮೂಲಕ ರಾಜಕೀಯ ಲಾಭ ಪಡೆಯಲು ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿದೆ.

ಆಪರೇಷನ್ ಕಮಲದಿಂದ ಈ ಹಿಂದೆ ಪಕ್ಷಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೆಟ್ಟ ಹೆಸರು ಬಂದಿತ್ತು. ಈ ಬಾರಿ ಎಚ್ಚರಿಕೆ ಹೆಜ್ಜೆ ಇಟ್ಟಿರುವ ರಾಜ್ಯ ನಾಯಕರು, ಕಾಂಗ್ರೆಸ್-ಜೆಡಿಎಸ್‍ನಲ್ಲಿರುವ ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ.

ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಯ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗದ ಕೆಲ ಶಾಸಕರು ಸರ್ಕಾರದ ನಡವಳಿಕೆಗಳಿಂದ ಬೇಸತ್ತು ಬಿಜೆಪಿ ಸೇರಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.

ಶಾಸಕರಿಗೆ ಯಾವುದೇ ರೀತಿಯ ಆಮಿಷವೊಡ್ಡದೆ ಸ್ವಯಂ ಪ್ರೇರಿತರಾಗಿ ಬಂದರೆ ಅಂತಹ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಮಂತ್ರಿ ಸ್ಥಾನ, ಚುನಾವಣಾ ಖರ್ಚು-ವೆಚ್ಚ, ಪಕ್ಷದಲ್ಲಿ ಸ್ಥಾನಮಾನ ಇಂತಹ ಯಾವುದೇ ಆಶ್ವಾಸನೆಗಳನ್ನು ಕೊಡಬಾರದೆಂದು ಸೂಚಿಸಲಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆಯೇ ಹಾವೇರಿ ಜಿಲ್ಲೆಯ ಶಾಸಕರೊಬ್ಬರು ಬಿಜೆಪಿ ಪ್ರಮುಖರೊಬ್ಬರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಇದಕ್ಕೆ ಅವಕಾಶ ನೀಡದೆ ಬಿಜೆಪಿ ಹಿರಿಯ ನಾಯಕರೊಬ್ಬರು, ನೀವೊಬ್ಬರು ರಾಜೀನಾಮೆ ನೀಡಿದರೆ ಪ್ರಯೋಜನವಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಬೇಕಾದರೆ ಕನಿಷ್ಠ ಪಕ್ಷ 9 ರಿಂದ 10 ಶಾಸಕರು ಪಕ್ಷ ತೊರೆದು ಬರಬೇಕು. ಸ್ವಲ್ಪ ದಿನಗಳವರೆಗೆ ಕಾಯಬೇಕು. ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಸಲಹೆ ಮಾಡಿದ್ದಾರೆ.
ಉತ್ತರ ಕರ್ನಾಟಕದ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕೆಲ ಶಾಸಕರು ಬಿಜೆಪಿ ನಾಯಕರ ಜೊತೆ ಸತತ ಸಂಪರ್ಕದಲ್ಲಿದ್ದು ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.

ಇದಕ್ಕೆ ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಿದ್ದು, ಡಿಸೆಂಬರ್ ತಿಂಗಳಿನೊಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬೇಕೆಂಬ ಸೂಚನೆಯನ್ನು ಕೊಟ್ಟಿದ್ದಾರೆ. ಡಿಸೆಂಬರ್ ತಿಂಗಳ ಅಂತ್ಯಕ್ಕೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಘಡ ವಿಧಾನಸಭೆ ಚುನಾವಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯಬೇಕೆಂಬ ಹುಕುಂ ಹೈಕಮಾಂಡ್‍ನಿಂದ ಬಂದಿದೆ.
ಶಾಸಕರಿಗೆ ಗಾಳ:
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದು, ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡು ಅಧಿಕಾರ ಕಳೆದುಕೊಳ್ಳುವಂತಾಯಿತು. ಇದರಿಂದ ಕೊತ ಕೊತ ಕುದಿಯುತ್ತಿರುವ ಯಡಿಯೂರಪ್ಪ ಅವರು ಅತೃಪ್ತ ಶಾಸಕರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ ಕಾಂಗ್ರೆಸ್-ಜೆಡಿಎಸ್‍ನಿಂದ 12ಕ್ಕೂ ಹೆಚ್ಚು ಶಾಸಕರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮುಂದುವರೆದಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು ಸಂಪುಟದಲ್ಲಿ ಸ್ಥಾನಮಾನ ಸಿಗದಿದ್ದರೆ ಪಕ್ಷದ ವಿರುದ್ಧವೇ ಬಂಡಾಯ ಸಾರಲು ತೀರ್ಮಾನಿಸಿದ್ದಾರೆ.
ಯಾವುದೇ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆವರೆಗೂ ಮುಂದುವರೆಯಲು ಅವಕಾಶ ನೀಡಬಾರದು ಎಂಬುದು ಹೈಕಮಾಂಡ್ ನಿರ್ದೇಶನ. ಅಲ್ಲಿಯವರೆಗೂ ಅವಕಾಶ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವುದಲ್ಲದೆ, ಸರ್ಕಾರ ಸುಭದ್ರವಾಗುತ್ತದೆ ಎಂಬ ಆತಂಕವೂ ಎದುರಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ದೋಸ್ತಿ ಮಾಡಿಕೊಂಡು ಚುನಾವಣೆ ಎದುರಿಸಿ ಹೆಚ್ಚಿನ ಸ್ಥಾನ ಬಂದರೆ ಸರ್ಕಾರ ಸ್ಥಿರವಾಗುತ್ತದೆ. ಮುಂದೆ ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಮಾಡುವ ಅವಕಾಶ ಸಿಗುವುದಿಲ್ಲ. ಅಷ್ಟರೊಳಗೆ ಶಾಸಕರನ್ನು ಸೆಳೆಯುವಂತೆ ರಾಷ್ಟ್ರೀಯ ನಾಯಕರು ಹಸಿರು ನಿಶಾನೆ ತೋರಿದ್ದಾರೆ.
ಅತ್ಯಂತ ಜಾಗರೂಕತೆಯಿಂದ ಶಾಸಕರನ್ನು ಸಂಪರ್ಕಿಸುತ್ತಿರುವ ಬಿಜೆಪಿ ಹಿರಿಯ ನಾಯಕರು ಎಷ್ಟು ಸಾಧ್ಯವೋ ಅಷ್ಟು ಬೇಗ ಸರ್ಕಾರವನ್ನು ಅಸ್ಥಿರಗೊಳಿಸಿ ವಿಧಾನಸೌಧದಲ್ಲಿ ಕಮಲದ ಪತಾಕೆಯನ್ನು ಹಾರಿಸುವ ಹವಣಿಕೆಯಲ್ಲಿದ್ದಾರೆ. ಸರ್ಕಾರದ ವಿರುದ್ಧ ಪದೇ ಪದೇ ಬೆಂಕಿ ಉಗುಳುತ್ತಿರುವ ಭಿನ್ನಮತೀಯರನ್ನೇ ಗುರಿಯಾಗಿಸಿಕೊಂಡು ಸೆಳೆಯುವ ತಂತ್ರ ಮುಂದುವರೆದಿದೆ. ಈ ಕಾರ್ಯಾಚರಣೆ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಸಮ್ಮಿಶ್ರ ಸರ್ಕಾರದಲ್ಲಿ ನಡೆಯುವ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ