
ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟ ಮಹಿಳೆಯರ ಹಾಕಿ ಫೈನಲ್ ಲಗ್ಗೆ ಇಡುವ ಮೂಲಕ ಚಿನ್ನದ ಪದಕ ಆಸೆ ಮೂಡಿಸಿದ್ದ ಭಾರತೀಯ ವನಿತೆಯರ ತಂಡ ಪೈನಲ್ ನಲ್ಲಿ ನಿರಾಶೆ ಅನುಭವಿಸಿದೆ.
ಏಶ್ಯನ್ ಗೇಮ್ಸ್ ನ ಮಹಿಳೆಯರ ಹಾಕಿ ಫೈನಲ್ ನಲ್ಲಿ ಶುಕ್ರವಾರ ಜಪಾನ್ ವಿರುದ್ಧ ಭಾರತ 1-2 ಅಂತರದಲ್ಲಿ ಸೋಲು ಅನುಭಸಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ. ಅಲ್ಲದೆ ಈ ಸೋಲಿನೊಂದಿಗೆ ಟೋಕಿಯೊ ಒಲಿಂಪಿಕ್ಸ್ ಗೆ ನೇರವಾಗಿ ಪ್ರವೇಶ ಪಡೆಯುವ ಭಾರತದ ಮಹಿಳೆಯರ ಹಾಕಿ ತಂಡದ ಕನಸು ಕೂಡ ಕಮರಿ ಹೋಗಿದೆ.
ಪಂದ್ಯದ ಆರಂಭದಲ್ಲಿ ಭಾರತೀಯ ವನಿತೆಯರ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿದರಾದರೂ, ಭಾರತೀಯ ಗೋಲ್ ಕೀಪರ್ ಮೋನಿಕಾರನ್ನು ವಂಚಿಸಿ ಮೊದಲ ಗೋಲು ಗಳಿಸುವಲ್ಲಿ ಜಪಾನ್ ಯಶಸ್ವಿಯಾಯಿತು. ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಜಪಾನ್ ನ ಅದನ್ನು ಗೋಲಾಗಿ ಪರಿವರ್ತನೆ ಮಾಡಿಕೊಂಡಿತು. ಬಳಿಕ ಜಪಾನ್ ದಿಟ್ಟ ತಿರುಗೇಟು ನೀಡಿದ ಭಾರತ ನೇಹಾ ಗೋಯಲ್ ಅವರ ಮುಖಾಂತರ ಗೋಲು ದಾಖಲಿಸಿ ಸಮಬಲ ಸಾಧಿಸಿತು.
ಆದರೆ, ಆ ಬಳಿಕ ಜಪಾನ್ ನ ಮೊಟೋಮಿ ಕವಾಮುರಾ ಅವರು, ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಗೋಲು ದಾಖಲಿಸಿ ಜಪಾನ್ ಭರ್ಜರಿ ಮುನ್ನಡೆ ನೀಡಿದರು. ಆ ಮೂಲಕ ಜಪಾನ್ ತಂಡ ಭಾರತವನ್ನು 2-1 ಅಂತರದಲ್ಲಿ ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತು.